Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಕೊರಿಂಥದವರಿಗೆ 10

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ನಾನು ನಿಮ್ಮ ಬಳಿಯಲ್ಲಿ ಮುಖಾಮುಖಿಯಾಗಿ ಮಾತನಾಡುವಾಗ, “ಮೃದುವಾಗಿಯೂ” ನಿಮ್ಮಿಂದ ದೂರವಿರುವಾಗ “ಕಠಿಣನಾಗಿಯೂ ವರ್ತಿಸುವವನು” ಎಂತಲೂ ನೀವು ತಿಳಿದಿದ್ದೀರಿ. ಅಂಥ ಪೌಲನೆಂಬ, ನಾನು ಕ್ರಿಸ್ತ ಯೇಸುವಿನ ದೀನತ್ವದಿಂದಲೂ ಸಾತ್ವಿಕತೆಯಿಂದಲೂ ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ:
2ನಾನು ನಿಮ್ಮ ಬಳಿಗೆ ಬಂದಾಗ, ಕಠಿಣವಾಗಿ ವರ್ತಿಸಲು ನನಗೆ ಅವಕಾಶಕೊಡಬೇಡಿರಿ. ಏಕೆಂದರೆ ನಾವು ಪ್ರಾಪಂಚಿಕ ರೀತಿಗನುಸಾರವಾಗಿ ನಡೆಯುತ್ತಿದ್ದೇವೆಂದು ಆಕ್ಷೇಪಿಸುವ ಕೆಲವರ ವಿರುದ್ಧ ಖಂಡಿತವಾಗಿಯು ಕಠಿಣನಾಗಿಯೇ ವರ್ತಿಸಬೇಕೆಂದಿದ್ದೇನೆ.
3ನಾವು ಈ ಲೋಕದಲ್ಲಿ ಜೀವಿಸುವವರಾದರೂ, ನಾವು ಲೋಕದವರಂತೆ ಹೋರಾಟ ಮಾಡುವವರಲ್ಲ.
4ನಾವು ಹೋರಾಡುವಾಗ ಉಪಯೋಗಿಸುವ ಆಯುಧಗಳು ಲೋಕದವುಗಳಲ್ಲ. ಅವುಗಳಿಗೆ ಕೋಟೆಗಳನ್ನೇ ಕೆಡವಿ ಹಾಕುವ ದೈವಿಕ ಶಕ್ತಿ ಇದೆ.
5ನಾವು ದೈವಜ್ಞಾನವನ್ನು ವಿರೋಧಿಸುವ ವಾಗ್ವಾದಗಳನ್ನೂ ಪ್ರತಿಯೊಂದು ನಟನೆಯನ್ನೂ ಧ್ವಂಸಮಾಡುತ್ತೇವೆ. ಪ್ರತಿಯೊಂದು ಯೋಚನೆಗಳನ್ನು ಕ್ರಿಸ್ತ ಯೇಸುವಿಗೆ ವಿಧೇಯವಾಗುವಂತೆ ಸೆರೆಹಿಡಿಯುವವರು ಆಗಿದ್ದೇವೆ.
6ನಿಮ್ಮ ವಿಧೇಯತ್ವವು ಪರಿಪೂರ್ಣವಾದಾಗ, ನಾವು ಪ್ರತಿಯೊಂದು ಅವಿಧೇಯತ್ವವನ್ನೂ ಶಿಕ್ಷಿಸಲು ಸಿದ್ಧರಾಗಿದ್ದೇವೆ.
7ನೀವು ಹೊರಗಿನ ತೋರಿಕೆಗಳನ್ನು ಮಾತ್ರ ತೀರ್ಪುಮಾಡುವವರಾಗಿದ್ದೀರಿ. ಯಾರಾದರೂ ತಾನು ಯೇಸುವಿಗೆ ಸೇರಿದವನು ಎಂದು ದೃಢವಾಗಿ ನಂಬುವುದಾದರೆ, ತಾನು ಹೇಗೆ ಕ್ರಿಸ್ತ ಯೇಸುವಿನವನೋ, ಹಾಗೆಯೇ ನಾವೂ ಕ್ರಿಸ್ತ ಯೇಸುವಿನವರು ಎಂದು ಅವನು ತಿಳಿದುಕೊಳ್ಳಲಿ.
8ನಿಮ್ಮನ್ನು ಕೆಡವಿ ಹಾಕುವುದಕ್ಕಲ್ಲ. ನಿಮ್ಮ ಭಕ್ತಿವೃದ್ಧಿಮಾಡಲಿಕ್ಕೆ ಕರ್ತ ಯೇಸು ನಮಗೆ ಅಧಿಕಾರವನ್ನು ಕೊಟ್ಟಿದ್ದಾರೆ. ಈ ಅಧಿಕಾರದ ಬಗ್ಗೆ ನಾವು ಒಂದು ವೇಳೆ ಹೆಚ್ಚಾಗಿ ಹೊಗಳಿಕೊಂಡರೂ ಹಾಗೆ ಹೊಗಳಿಕೊಳ್ಳುವುದರಲ್ಲಿ ನಾನು ನಾಚಿಕೆಪಡುವುದಿಲ್ಲ.
9ನನ್ನ ಪತ್ರಗಳಿಂದ ನಾನು ನಿಮಗೆ ಭಯ ಹುಟ್ಟಿಸಲು ಪ್ರಯತ್ನಿಸುವುದಕ್ಕೆ ನನಗೆ ಮನಸ್ಸಿಲ್ಲ.
10“ಅವನ ಪತ್ರಗಳು ತೀಕ್ಷ್ಣವಾಗಿಯೂ ಶಕ್ತಿಯುತವಾಗಿಯೂ ಇವೆ. ಆದರೆ ಅವನು ಎದುರು ಬಂದಾಗ ನಿರ್ಬಲನೂ ಕೆಲಸಕ್ಕೆ ಬಾರದ ಮಾತುಗಳನ್ನಾಡುವವನೂ ಆಗಿದ್ದಾನೆ,” ಎಂದು ಕೆಲವರು ಹೇಳುತ್ತಾರೆ.
11ಆದರೆ, ನಾವು ದೂರದಲ್ಲಿರುವಾಗ ಪತ್ರಗಳ ಮಾತಿನಲ್ಲಿ ಎಂಥವರಾಗಿದ್ದೇವೋ, ಹತ್ತಿರದಲ್ಲಿರುವಾಗಲೂ ಕೃತ್ಯದಲ್ಲಿ ಅಂಥವರಾಗಿಯೇ ಇರುತ್ತೇವೆ ಎಂದು ಅಂಥವರು ಅರ್ಥಮಾಡಿಕೊಳ್ಳಲಿ.
12ತಮ್ಮನ್ನು ತಾವೇ ಹೊಗಳಿಕೊಳ್ಳುವವರೊಂದಿಗೆ ನಾವು ಹೋಲಿಸಿಕೊಳ್ಳಲು ಯತ್ನಿಸುವುದಿಲ್ಲ. ಏಕೆಂದರೆ, ಅವರು ತಮ್ಮತಮ್ಮೊಳಗೆ ತಮ್ಮನ್ನು ಅಳತೆ ಮಾಡಿಕೊಂಡು ಒಬ್ಬರೊಂದಿಗೊಬ್ಬರು ಹೋಲಿಸಿಕೊಳ್ಳುವುದರಿಂದ ವಿವೇಕವಿಲ್ಲದವರಾಗಿರುತ್ತಾರೆ.
13ನಾವಾದರೋ ಮೇರೆ ತಪ್ಪಿ ಹೊಗಳಿಕೊಳ್ಳುವುದಿಲ್ಲ; ದೇವರು ತಾವೇ ನಮಗೆ ನೇಮಿಸಿದ ಸೇವಾಕ್ಷೇತ್ರದ ಮೇರೆಯೊಳಗಿದ್ದು ಹೊಗಳಿಕೊಳ್ಳುತ್ತೇವೆ. ಆ ಮೇರೆಯೊಳಗೆ ನೀವೂ ಒಳಪಟ್ಟಿದ್ದೀರಿ.
14ನಾವು ಮೊದಲು ನಿಮ್ಮ ಬಳಿಗೆ ಬಾರದಿದ್ದರೆ, ನಮ್ಮ ಹೊಗಳಿಕೊಳ್ಳುವಿಕೆಯು ಮೇರೆಯನ್ನು ಉಲ್ಲಂಘಿಸುವುದಾಗಿರುತ್ತಿತ್ತು; ಆದರೆ ನಾವು ನಿಮಗೆ ಕ್ರಿಸ್ತ ಯೇಸುವಿನ ಸುವಾರ್ತೆಯನ್ನು ಸಾರುವುದಕ್ಕಾಗಿ ನಿಮ್ಮ ಬಳಿಗೆ ಬಂದೇವಲ್ಲಾ.
15ಬೇರೆಯವರು ಮಾಡಿದ ಪ್ರಯಾಸದ ಫಲಕ್ಕಾಗಿ, ನಾವು ಮೇರೆ ತಪ್ಪಿ ಹೊಗಳಿಕೊಳ್ಳುವವರಲ್ಲ. ಆದರೆ ನಿಮ್ಮ ವಿಶ್ವಾಸವು ವೃದ್ಧಿಯಾದಂತೆ, ನಿಮ್ಮ ಮಧ್ಯೆ ನಮ್ಮ ಸೇವಾಕ್ಷೇತ್ರವು ಅಧಿಕವಾಗಿ ವಿಸ್ತಾರವಾಗಬೇಕೆಂದು ನಿರೀಕ್ಷಿಸುತ್ತೇವೆ.
16ಏಕೆಂದರೆ, ನಿಮ್ಮ ಪ್ರದೇಶಗಳಿಗೆ ಆಚೆ ಇರುವ ಸ್ಥಳಗಳಲ್ಲಿಯೂ ನಾವು ಸುವಾರ್ತೆಯನ್ನು ಸಾರಬೇಕು. ಇತರರು ಮಾಡಿದ ಸೇವಾಕ್ಷೇತ್ರದಲ್ಲಿ ನಾವು ಸೇವೆಮಾಡಿ, ಹೆಚ್ಚಳ ಪಡುವುದಕ್ಕೆ ನಮಗಿಷ್ಟವಿಲ್ಲ.
17ಆದರೆ, “ಹೆಚ್ಚಳ ಪಡುವವನು ಕರ್ತ ದೇವರಲ್ಲಿಯೇ ಹೆಚ್ಚಳ ಪಡಲಿ.”
18ತನ್ನನ್ನು ತಾನೇ ಹೊಗಳಿಕೊಳ್ಳುವವನಲ್ಲ, ಕರ್ತ ಯೇಸು ಯಾರನ್ನು ಹೊಗಳುತ್ತಾರೋ ಅವನೇ ಯೋಗ್ಯನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.