Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಪೂರ್ವಕಾಲ ವೃತ್ತಾಂತ 8

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಸೊಲೊಮೋನನು ಇಪ್ಪತ್ತು ವರ್ಷಗಳಲ್ಲಿ ಯೆಹೋವ ದೇವರ ಆಲಯವನ್ನೂ, ತನ್ನ ಅರಮನೆಯನ್ನೂ ಕಟ್ಟಿಸಿ ತೀರಿಸಿದ ತರುವಾಯ,
2ಹೀರಾಮನು ಸೊಲೊಮೋನನಿಗೆ ತಿರುಗಿ ಕೊಟ್ಟ ಪಟ್ಟಣಗಳನ್ನು ಸೊಲೊಮೋನನು ಕಟ್ಟಿಸಿ, ಇಸ್ರಾಯೇಲರನ್ನು ಅಲ್ಲಿ ನಿವಾಸವಾಗಿರುವಂತೆ ಮಾಡಿದನು.
3ಸೊಲೊಮೋನನು ಹಮಾತ್ ಚೋಬವನ್ನು ವಶಪಡಿಸಿಕೊಂಡನು.
4ಅವನು ಮರುಭೂಮಿಯಲ್ಲಿರುವ ತದ್ಮೋರ್ ಪಟ್ಟಣವನ್ನೂ, ಹಮಾತಿನಲ್ಲಿರುವ ಉಗ್ರಾಣದ ಪಟ್ಟಣಗಳನ್ನೂ ಕಟ್ಟಿಸಿದನು.
5ಇವುಗಳಲ್ಲದೆ, ಮೇಲಿನ ಬೇತ್ ಹೋರೋನ್ ಮತ್ತು ಕೆಳಗಿನ ಬೇತ್ ಹೋರೋನ್ ಪಟ್ಟಣಗಳನ್ನು ಪುನಃ ನಿರ್ಮಿಸಿದನು. ಈ ಪಟ್ಟಣಗಳು ಬಲವಾದ ಗೋಡೆಗಳು, ಬಾಗಿಲುಗಳು ಮತ್ತು ಅಗುಳಿಗಳು ಉಳ್ಳ ಕೋಟೆ ಪಟ್ಟಣಗಳಾಗಿ ಸೊಲೊಮೋನನು ಕಟ್ಟಿಸಿದನು.
6ಅಲ್ಲದೆ, ಬಾಲಾತ್ ಪಟ್ಟಣವನ್ನೂ, ಉಗ್ರಾಣದ ಪಟ್ಟಣಗಳನ್ನೂ, ತನ್ನ ರಾಹುತರಿಗೋಸ್ಕರ ಮತ್ತು ರಥಗಳಿಗೋಸ್ಕರ ಪಟ್ಟಣಗಳನ್ನೂ ಕಟ್ಟಿಸಿದನು. ಯೆರೂಸಲೇಮಿನಲ್ಲಿಯೂ ಲೆಬನೋನಿನಲ್ಲಿಯೂ ತನ್ನ ರಾಜ್ಯದ ಎಲ್ಲಾ ಪ್ರಾಂತಗಳಲ್ಲಿಯೂ ತನಗೆ ಇಷ್ಟವಾದವುಗಳನ್ನೆಲ್ಲಾ ಕಟ್ಟಿಸಿದನು.
7ಸೊಲೊಮೋನನು ಇಸ್ರಾಯೇಲರಲ್ಲದ ಅಮೋರಿಯರು, ಹಿತ್ತಿಯರು, ಪೆರಿಜೀಯರು, ಹಿವ್ವಿಯರು, ಯೆಬೂಸಿಯರು, ಇವರಲ್ಲಿ ಉಳಿದ ಸಮಸ್ತ ಜನರನ್ನೂ
8ಇಸ್ರಾಯೇಲರು ಸಂಹರಿಸದೆ ಉಳಿಸಿದ್ದ ಅವರ ಮಕ್ಕಳನ್ನೂ ಸೊಲೊಮೋನನು ಇಂದಿನವರೆಗೂ ದಾಸತ್ವಕ್ಕಾಗಿ ನೇಮಿಸಿದನು.
9ಆದರೆ ಸೊಲೊಮೋನನು ತನ್ನ ಕೆಲಸಕ್ಕಾಗಿ ಇಸ್ರಾಯೇಲರನ್ನು ದಾಸರಾಗಿ ಮಾಡಲಿಲ್ಲ. ಆದರೆ ಅವರು ಯುದ್ಧಭಟರಾಗಿಯೂ, ಅಧಿಪತಿಗಳಲ್ಲಿ ಪ್ರಧಾನರಾಗಿಯೂ, ತನ್ನ ರಥಗಳ ಮೇಲೆಯೂ, ರಾಹುತರ ಮೇಲೆಯೂ ಅಧಿಪತಿಗಳಾಗಿಯೂ ಇರುವಂತೆ ಮಾಡಿದನು.
10ಇವರು ಅರಸನಾದ ಸೊಲೊಮೋನನ ಅಧಿಪತಿಗಳಲ್ಲಿ ಪ್ರಧಾನರಾಗಿದ್ದರು, ಇವರು ಇನ್ನೂರೈವತ್ತು ಮಂದಿ ಆಳುಗಳ ಮೇಲೆ ಅಧಿಕಾರಿಗಳಾಗಿದ್ದರು.
11ಸೊಲೊಮೋನನು, “ಯೆಹೋವ ದೇವರ ಒಡಂಬಡಿಕೆಯ ಮಂಜೂಷವಿದ್ದ ಸ್ಥಳಗಳು ಪರಿಶುದ್ಧವಾಗಿರುವುದರಿಂದ, ನನ್ನ ಹೆಂಡತಿಯು ಇಸ್ರಾಯೇಲಿನ ಅರಸನಾದ ದಾವೀದನ ಅರಮನೆಯಲ್ಲಿ ವಾಸವಾಗಿರಕೂಡದು,” ಎಂದು ಹೇಳಿ ಸೊಲೊಮೋನನು ಫರೋಹನ ಮಗಳನ್ನು ದಾವೀದನ ಪಟ್ಟಣದಲ್ಲಿರಿಸದೆ ತಾನು ಆಕೆಗೋಸ್ಕರ ಕಟ್ಟಿಸಿದ ಅರಮನೆಯಲ್ಲಿ ಅವಳನ್ನು ಇರಿಸಿದನು.
12ಆಗ ಸೊಲೊಮೋನನು ದ್ವಾರಾಂಗಳದ ಮುಂದೆ ತಾನು ಕಟ್ಟಿಸಿದ ಯೆಹೋವ ದೇವರ ಬಲಿಪೀಠದ ಮೇಲೆ ಯೆಹೋವ ದೇವರಿಗೆ ದಹನಬಲಿಗಳನ್ನು ಅರ್ಪಿಸಿದನು.
13ದಿನಂಪ್ರತಿ ಮೋಶೆಯ ಆಜ್ಞೆಯ ಪ್ರಕಾರ ವಿಶ್ರಾಂತಿಯ ದಿನಗಳಲ್ಲಿಯೂ ಅಮಾವಾಸ್ಯೆಗಳಲ್ಲಯೂ ವರುಷಕ್ಕೆ ಮೂರು ಸಾರಿ ಪವಿತ್ರ ಹಬ್ಬಗಳಾದ ಹುಳಿಯಿಲ್ಲದ ರೊಟ್ಟಿಗಳ ಹಬ್ಬದಲ್ಲಿಯೂ ವಾರಗಳ ಹಬ್ಬದಲ್ಲಿಯೂ ಗುಡಾರಗಳ ಹಬ್ಬದಲ್ಲಿಯೂ ಬಲಿಗಳನ್ನು ಅರ್ಪಿಸಿದನು.
14ಅವನು ತನ್ನ ತಂದೆಯಾದ ದಾವೀದನ ಕ್ರಮದ ಪ್ರಕಾರ, ಅವರ ಸೇವೆಗೆ ಯಾಜಕ ವರ್ಗಗಳವರನ್ನೂ ಪ್ರತಿ ದಿವಸಕ್ಕೆ ಬೇಕಾದ ಕಾರ್ಯದ ಪ್ರಕಾರ, ಯಾಜಕರ ಮುಂದೆ ಸ್ತುತಿಸುವುದಕ್ಕೂ, ಸೇವೆ ಮಾಡುವುದಕ್ಕೂ ತಮ್ಮ ವಿಚಾರಗಳಲ್ಲಿ ಲೇವಿಯರನ್ನೂ, ಸೇವೆಯ ಬಾಗಿಲಲ್ಲಿ ತಮ್ಮ ವರ್ಗಗಳ ಸರದಿಯ ಪ್ರಕಾರವಾಗಿ ದ್ವಾರಪಾಲಕರನ್ನೂ ನೇಮಿಸಿದನು. ಏಕೆಂದರೆ ದೇವರ ಮನುಷ್ಯನಾದ ದಾವೀದನು ಹಾಗೆಯೇ ನೇಮಿಸಿದ್ದನು.
15ಅವರು ಯಾವ ಕಾರ್ಯದಲ್ಲಾದರೂ, ಬೊಕ್ಕಸಗಳಲ್ಲಾದರೂ ಅರಸನು ಯಾಜಕರಿಗೂ ಲೇವಿಯರಿಗೂ ಹೇಳಿದ ಆಜ್ಞೆಯನ್ನು ಮೀರಲಿಲ್ಲ.
16ಯೆಹೋವ ದೇವರ ಆಲಯದ ಅಸ್ತಿವಾರ ಹಾಕಿದ ದಿವಸದವರೆಗೂ ಅದನ್ನು ಕಟ್ಟಿಸಿ ತೀರಿಸುವವರೆಗೂ ಸೊಲೊಮೋನನ ಕೆಲಸವೆಲ್ಲಾ ಮುಗಿದು, ಯೆಹೋವ ದೇವರ ಆಲಯವು ಸಿದ್ಧವಾಯಿತು.
17ಆಗ ಸೊಲೊಮೋನನು ಎದೋಮ್ ದೇಶದ ಸಮುದ್ರತೀರದ ಬಳಿಯಲ್ಲಿರುವ ಎಚ್ಯೋನ್ ಗೆಬೆರ್, ಏಲೋತ್ ಎಂಬ ಊರುಗಳಿಗೆ ಹೊರಟುಹೋದನು.
18ಹೀರಾಮನು ತನ್ನ ಸೇವಕರ ಮುಖಾಂತರ ಹಡಗುಗಳನ್ನೂ, ಸಮುದ್ರ ಪ್ರಯಾಣದಲ್ಲಿ ನಿಪುಣರಾದ ತನ್ನ ನಾವಿಕರನ್ನು ಅವನ ಬಳಿಗೆ ಕಳುಹಿಸಿದನು. ಅವರು ಸೊಲೊಮೋನನ ಸೇವಕರ ಸಂಗಡ ಓಫೀರಿಗೆ ಹೋಗಿ, ಅಲ್ಲಿಂದ ಅರಸನಾದ ಸೊಲೊಮೋನನಿಗೆ 15,000 ಕಿಲೋಗ್ರಾಂ ಬಂಗಾರವನ್ನು ತೆಗೆದುಕೊಂಡು ಬಂದರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.