Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಪೂರ್ವಕಾಲ ವೃತ್ತಾಂತ 13

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಅರಸನಾದ ಯಾರೊಬ್ಬಾಮನ ಆಳಿಕೆಯ ಹದಿನೆಂಟನೆಯ ವರ್ಷದಲ್ಲಿ ಅಬೀಯನು ಯೆಹೂದದ ಅರಸನಾಗಿ,
2ಯೆರೂಸಲೇಮಿನಲ್ಲಿ ಮೂರು ವರ್ಷ ಆಳಿದನು. ಅವನ ತಾಯಿಯ ಹೆಸರು ಮೀಕಾಯ, ಇವಳು ಗಿಬೆಯದ ಉರಿಯೇಲನ ಮಗಳು. ಅಬೀಯನಿಗೂ, ಯಾರೊಬ್ಬಾಮನಿಗೂ ಯುದ್ಧ ಉಂಟಾಗಿತ್ತು.
3ಆಗ ಅಬೀಯನು ಯುದ್ಧಭಟರಾದ ಪರಾಕ್ರಮಶಾಲಿಗಳ ಸೈನ್ಯವನ್ನು ಯುದ್ಧಕ್ಕೆ ಸಿದ್ಧಮಾಡಿದನು. ಆಯ್ಕೆಯಾದ ನಾಲ್ಕು ಲಕ್ಷ ಜನರಿದ್ದರು. ಯಾರೊಬ್ಬಾಮನು ಅವನಿಗೆ ಎದುರಾಗಿ ಎಂಟು ಲಕ್ಷಮಂದಿ ಆಯ್ಕೆಯಾದ ಪರಾಕ್ರಮಶಾಲಿಗಳನ್ನು ಯುದ್ಧಕ್ಕೆ ನಿಲ್ಲಿಸಿದನು.
4ಆಗ ಅಬೀಯನು ಎಫ್ರಾಯೀಮ್ ಬೆಟ್ಟದಲ್ಲಿರುವ ಚೆಮಾರಯಿಮ್ ಎಂಬ ಬೆಟ್ಟದ ಮೇಲೆ ನಿಂತು, “ಯಾರೊಬ್ಬಾಮನೇ, ಸಮಸ್ತ ಇಸ್ರಾಯೇಲರೇ, ನನ್ನ ಮಾತು ಕೇಳಿರಿ.
5ಇಸ್ರಾಯೇಲಿನ ದೇವರಾದ ಯೆಹೋವ ದೇವರು ಇಸ್ರಾಯೇಲಿನ ಮೇಲೆ ರಾಜ್ಯವನ್ನು ಎಂದೆಂದಿಗೂ ದಾವೀದನಿಗೂ, ಅವನ ವಂಶದವರಿಗೂ ಉಪ್ಪಿನ ಒಡಂಬಡಿಕೆಯಿಂದ ಕೊಟ್ಟರೆಂದು ನಿಮಗೆ ಗೊತ್ತಿಲ್ಲವೋ.
6ಆದರೆ ದಾವೀದನ ಮಗ ಸೊಲೊಮೋನನ ಸೇವಕನಾಗಿದ್ದ ನೆಬಾಟನ ಮಗ ಯಾರೊಬ್ಬಾಮನು ತನ್ನ ಯಜಮಾನನ ಮೇಲೆ ತಿರುಗಿಬಿದ್ದನು.
7ಇದಲ್ಲದೆ ನಿಷ್ಪ್ರಯೋಜಕರಾದ ದುಷ್ಟರು ಅವನ ಬಳಿಗೆ ಕೂಡಿಬಂದು, ಸೊಲೊಮೋನನ ಮಗ ರೆಹಬ್ಬಾಮನು ಎಳೆಯ ಪ್ರಾಯದವನೂ, ನಿರ್ಣಯಿಸಲಾಗದವನೂ ಅವರನ್ನು ಎದುರಿಸಲು ಬಲವಿಲ್ಲದವನೂ ಆಗಿರುವುದರಿಂದ ಅವನಿಗೆ ವಿರೋಧವಾಗಿ ತಮ್ಮನ್ನು ಬಲಪಡಿಸಿಕೊಂಡರು.
8“ಈಗ ದಾವೀದನ ವಂಶಜರ ಕೈಯಲ್ಲಿರುವ ಯೆಹೋವ ದೇವರ ರಾಜ್ಯವನ್ನು ಎದುರಿಸುತ್ತೇವೆಂದು ನೀವು ಹೇಳಿಕೊಳ್ಳುತ್ತೀರಿ. ಇದಲ್ಲದೆ ನೀವು ಬಹು ಗುಂಪಾಗಿದ್ದೀರಿ. ಯಾರೊಬ್ಬಾಮನು ದೇವರುಗಳಾಗಿ ನಿಮಗೆ ಮಾಡಿದ ಬಂಗಾರದ ಕರುಗಳು ನಿಮ್ಮಲ್ಲಿ ಉಂಟು.
9ನೀವು ಯೆಹೋವ ದೇವರ ಯಾಜಕರಾದ ಆರೋನನ ವಂಶದವರಾದ ಲೇವಿಯರನ್ನೂ ತಳ್ಳಿ ಹಾಕಿ, ಅನ್ಯದೇಶಗಳ ಜನರಂತೆ ನಿಮಗೆ ಯಾಜಕರನ್ನು ಮಾಡಿಕೊಳ್ಳಲಿಲ್ಲವೋ? ಯಾವನಾದರೂ ದನದ ಮರಿಯಾದ ಹೋರಿಯನ್ನೂ, ಏಳು ಟಗರುಗಳನ್ನೂ ತೆಗೆದುಕೊಂಡು ಬಂದು, ತನ್ನನ್ನು ಪ್ರತಿಷ್ಠೆ ಮಾಡಿದರೆ ಅವನು ದೇವರಲ್ಲದವುಗಳಿಗೆ ಯಾಜಕನಾಗಿರುವನಷ್ಟೇ.
10“ನಮಗಾದರೋ ಯೆಹೋವ ದೇವರು ದೇವರಾಗಿದ್ದಾರೆ. ನಾವು ಅವರನ್ನು ಬಿಡಲಿಲ್ಲ. ಇದಲ್ಲದೆ ಯೆಹೋವ ದೇವರಿಗೆ ಸೇವೆ ಮಾಡುವ ಯಾಜಕರು ಆರೋನನ ಮಕ್ಕಳು. ಲೇವಿಯರು ಅವರಿಗೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದರು.
11ಅವರು ಪ್ರತಿ ಉದಯದಲ್ಲಿಯೂ, ಪ್ರತಿ ಸಾಯಂಕಾಲದಲ್ಲಿಯೂ ಯೆಹೋವ ದೇವರಿಗೆ ದಹನಬಲಿಗಳನ್ನೂ, ಸುಗಂಧ ಧೂಪವನ್ನೂ ಸುಡುತ್ತಾರೆ. ಇದಲ್ಲದೆ ಪರಿಶುದ್ಧ ಮೇಜಿನ ಮೇಲೆ ರೊಟ್ಟಿಗಳನ್ನು ಇಡುತ್ತಾ, ಪ್ರತಿ ಸಾಯಂಕಾಲದಲ್ಲಿ ಬಂಗಾರದ ದೀಪಸ್ತಂಭವನ್ನೂ, ಅದರ ದೀಪಗಳನ್ನೂ ಸಿದ್ಧಮಾಡಿ ಹಚ್ಚುತ್ತಾ ಇರುತ್ತಾರೆ. ನಾವು ನಮ್ಮ ದೇವರಾದ ಯೆಹೋವ ದೇವರ ಕಟ್ಟಳೆಯನ್ನು ಕೈಗೊಳ್ಳುತ್ತೇವೆ, ಆದರೆ ನೀವು ಅವರನ್ನು ಬಿಟ್ಟಿದ್ದೀರಿ.
12ದೇವರು ತಾವೇ ಅಧಿಪತಿಯಾಗಿ ನಮ್ಮ ಸಂಗಡ ಇದ್ದಾರೆ. ಇದಲ್ಲದೆ ನಿಮಗೆ ವಿರೋಧವಾಗಿ ಜಯಧ್ವನಿ ಮಾಡುವ ತುತೂರಿಗಳನ್ನು ಹಿಡಿದುಕೊಂಡ ಅವರ ಯಾಜಕರು ನಮಗಿದ್ದಾರೆ. ಇಸ್ರಾಯೇಲರೇ, ನೀವು ನಿಮ್ಮ ಪಿತೃಗಳ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ಯುದ್ಧಮಾಡಬೇಡಿರಿ. ನೀವು ಜಯಹೊಂದುವುದಿಲ್ಲ,” ಎಂದನು.
13ಆದರೆ ಯಾರೊಬ್ಬಾಮನು ಅಡಗಿಕೊಂಡವರನ್ನು ಸುತ್ತಲೂ ಅವರ ಹಿಂದೆ ಬರಮಾಡಿದನು. ಆದ್ದರಿಂದ ಇಸ್ರಾಯೇಲರು ಯೆಹೂದದವರ ಮುಂದೆಯೂ, ಅವರ ಹಿಂದೆಯೂ ಬಂದರು.
14ಯೆಹೂದದವರು ಹಿಂದಕ್ಕೆ ನೋಡಿದಾಗ, ಯುದ್ಧವು ಅವರ ಮುಂದೆಯೂ ಹಿಂದೆಯೂ ಇತ್ತು. ಆಗ ಯೆಹೋವ ದೇವರಿಗೆ ಅವರು ಮೊರೆಯಿಟ್ಟರು. ಯಾಜಕರು ತುತೂರಿಗಳನ್ನು ಊದಿದರು.
15ಆಗ ಯೆಹೂದ್ಯರು ಆರ್ಭಟಿಸಿದರು. ಯೆಹೂದ್ಯರು ಆರ್ಭಟಿಸಿದಾಗ, ದೇವರು ಅಬೀಯನ ಮತ್ತು ಯೆಹೂದದವರ ಮುಂದೆ ಯಾರೊಬ್ಬಾಮನನ್ನೂ, ಸಮಸ್ತ ಇಸ್ರಾಯೇಲರನ್ನೂ ಅಪಜಯಗೊಳಿಸಿದರು.
16ಇಸ್ರಾಯೇಲರು ಯೆಹೂದದವರ ಎದುರಿನಿಂದ ಓಡಿಹೋದರು. ಹೀಗೆ ದೇವರು ಇಸ್ರಾಯೇಲರನ್ನು ಯೆಹೂದದವರ ಕೈಯಲ್ಲಿ ಒಪ್ಪಿಸಿದರು.
17ಅಬೀಯನೂ, ಅವನ ಜನರೂ ಅವರಲ್ಲಿ ಬಹಳ ಮಂದಿಯನ್ನು ಹತಮಾಡಿದರು. ಇಸ್ರಾಯೇಲರಲ್ಲಿ ಐದು ಲಕ್ಷಮಂದಿ ಬಲಶಾಲಿಗಳಾದ ಸೈನಿಕರು ಹತರಾದರು.
18ಹೀಗೆ ಆ ಕಾಲದಲ್ಲಿ ಇಸ್ರಾಯೇಲರು ತಗ್ಗಿಹೋದರು. ಆದರೆ ಯೆಹೂದದವರು ತಮ್ಮ ಪಿತೃಗಳ ದೇವರಾದ ಯೆಹೋವ ದೇವರ ಮೇಲೆ ಆತುಕೊಂಡದ್ದರಿಂದ ಜಯ ಹೊಂದಿದರು.
19ಅಬೀಯನು ಯಾರೊಬ್ಬಾಮನನ್ನು ಹಿಂದಟ್ಟಿ ಅವನಿಂದ ಬೇತೇಲ್, ಯೆಷಾನಾ, ಎಫ್ರೋನ್ ಎಂಬ ಪಟ್ಟಣಗಳನ್ನೂ, ಅವುಗಳ ಗ್ರಾಮಗಳನ್ನೂ ವಶಪಡಿಸಿಕೊಂಡನು.
20ಯಾರೊಬ್ಬಾಮನು ಅಬೀಯನ ಜೀವಮಾನದಲ್ಲಿ ತಿರುಗಿ ಬಲಗೊಳ್ಳಲಿಲ್ಲ. ಯೆಹೋವ ದೇವರ ಶಿಕ್ಷೆಯಿಂದ ಯಾರೊಬ್ಬಾಮನು ಸತ್ತನು.
21ಅಬೀಯನು ಪ್ರಬಲನಾದನು. ಅವನಿಗೆ ಹದಿನಾಲ್ಕು ಮಂದಿ ಹೆಂಡತಿಯರೂ, ಇಪ್ಪತ್ತೆರಡು ಮಂದಿ ಪುತ್ರರೂ, ಹದಿನಾರು ಮಂದಿ ಪುತ್ರಿಯರೂ ಇದ್ದರು.
22ಅಬೀಯನ ಮಿಕ್ಕಾದ ಕ್ರಿಯೆಗಳೂ, ಅವನ ನಡೆನುಡಿಗಳ ಮಾತುಗಳೂ ಪ್ರವಾದಿಯಾದ ಇದ್ದೋವನ ವರ್ತಮಾನಗಳಲ್ಲಿ ಬರೆದಿರುತ್ತವೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.