Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಪೂರ್ವಕಾಲ ವೃತ್ತಾಂತ 1

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ದಾವೀದನ ಮಗ ಸೊಲೊಮೋನನು ತನ್ನ ರಾಜ್ಯದಲ್ಲಿ ಬಲಗೊಂಡನು ಮತ್ತು ಅವನ ದೇವರಾದ ಯೆಹೋವ ದೇವರು ಅವನ ಸಂಗಡ ಇದ್ದು, ಅವನನ್ನು ಉನ್ನತನನ್ನಾಗಿ ಮಾಡಿದರು.
2ಆಗ ಸೊಲೊಮೋನನು ಸಮಸ್ತ ಇಸ್ರಾಯೇಲರ ಶತಾಧಿಪತಿಗಳೊಂದಿಗೂ, ಸಹಸ್ರಾಧಿಪತಿಗಳೊಂದಿಗೂ, ನ್ಯಾಯಾಧಿಪತಿಗಳೊಂದಿಗೂ, ಪ್ರಧಾನರಾದವರೊಂದಿಗೂ, ಸಮಸ್ತ ಇಸ್ರಾಯೇಲರ ಪಿತೃಗಳ ಶ್ರೇಷ್ಠರಾದ ಸಮಸ್ತ ಪ್ರಭುಗಳೊಂದಿಗೂ ಮಾತನಾಡಿದನು.
3ಹೀಗೆ ಅವನೂ, ಅವನ ಸಂಗಡ ಸಮಸ್ತ ಸಮೂಹವೂ ಗಿಬ್ಯೋನಿನಲ್ಲಿರುವ ಉನ್ನತ ಸ್ಥಳಕ್ಕೆ ಹೋದರು. ಯೆಹೋವ ದೇವರ ಸೇವಕನಾದ ಮೋಶೆಯು ಮರುಭೂಮಿಯಲ್ಲಿ ಮಾಡಿದ ದೇವದರ್ಶನ ಗುಡಾರವು ಅಲ್ಲಿತ್ತು.
4ಆದರೆ ದಾವೀದನು ಯೆಹೋವ ದೇವರ ಮಂಜೂಷವನ್ನು ಕಿರ್ಯತ್ ಯಾರೀಮಿನಿಂದ ತಾನು ಅದಕ್ಕೋಸ್ಕರ ಸಿದ್ಧಮಾಡಿದ ಸ್ಥಳಕ್ಕೆ ತೆಗೆದುಕೊಂಡು ಬಂದಿದ್ದನು. ಅವನು ಯೆರೂಸಲೇಮಿನಲ್ಲಿ ಅದಕ್ಕೋಸ್ಕರ ಗುಡಾರವನ್ನು ಹಾಕಿಸಿದ್ದನು.
5ಆದರೆ ಊರಿಯನ ಮಗ, ಹೂರನ ಮೊಮ್ಮಗನಾದ ಬೆಚಲಯೇಲನು ಮಾಡಿದ ಕಂಚಿನ ಬಲಿಪೀಠವು ಗಿಬ್ಯೋನಿನಲ್ಲಿ ಯೆಹೋವ ದೇವರ ಗುಡಾರದ ಮುಂದೆ ಇತ್ತು. ಅಲ್ಲಿ ಸೊಲೊಮೋನನೂ, ಸಭೆಯೂ ದೇವರ ಇಚ್ಛೆಯನ್ನು ವಿಚಾರಿಸಿದರು.
6ಆಗ ಸೊಲೊಮೋನನು ಸಭೆಯ ಗುಡಾರದ ಬಳಿಯಲ್ಲಿ ಯೆಹೋವ ದೇವರ ಮುಂದೆ ಇರುವ ಕಂಚಿನ ಪೀಠದ ಬಳಿಗೆ ಹೋಗಿ, ಅದರ ಮೇಲೆ ಸಹಸ್ರ ದಹನಬಲಿಗಳನ್ನು ಅರ್ಪಿಸಿದನು.
7ಅದೇ ರಾತ್ರಿಯಲ್ಲಿ ದೇವರು ಸೊಲೊಮೋನನಿಗೆ ಕಾಣಿಸಿಕೊಂಡು ಅವನಿಗೆ, “ನಾನು ನಿನಗೆ ಏನು ವರ ಕೊಡಬೇಕು? ಕೇಳಿಕೋ,” ಎಂದರು.
8ಅದಕ್ಕೆ ಸೊಲೊಮೋನನು ದೇವರಿಗೆ, “ನೀವು ನನ್ನ ತಂದೆ ದಾವೀದನಿಗೆ ಮಹಾಕರುಣೆಯನ್ನು ತೋರಿಸಿದ್ದೀರಿ, ಅವನಿಗೆ ಬದಲಾಗಿ ನಾನು ಆಳುವಂತೆ ಮಾಡಿದಿರಿ.
9ಈಗ ಯೆಹೋವ ದೇವರೇ, ನೀವು ನನ್ನ ತಂದೆ ದಾವೀದನಿಗೆ ಮಾಡಿದ ವಾಗ್ದಾನವು ದೃಢವಾಗಲಿ. ಏಕೆಂದರೆ ಭೂಮಿಯ ಧೂಳಿನಷ್ಟು ಅಸಂಖ್ಯಾತ ಜನರ ಮೇಲೆ ನನ್ನನ್ನು ಅರಸನನ್ನಾಗಿ ಮಾಡಿದ್ದೀರಿ.
10ನಾನು ಈ ಜನರನ್ನು ಪರಿಪಾಲಿಸುವುದಕ್ಕೆ ಜ್ಞಾನವನ್ನೂ, ತಿಳುವಳಿಕೆಯನ್ನೂ ಕೊಡಿರಿ. ಏಕೆಂದರೆ ಈ ನಿಮ್ಮ ಮಹಾಜನರ ನ್ಯಾಯತೀರಿಸುವುದಕ್ಕೆ ಸಾಮರ್ಥ್ಯವುಳ್ಳವರು ಯಾರು?” ಎಂದನು.
11ಆಗ ದೇವರು ಸೊಲೊಮೋನನಿಗೆ, “ಇದು ನಿನ್ನ ಹೃದಯದಲ್ಲಿ ಇದ್ದುದರಿಂದಲೂ ನೀನು ಐಶ್ವರ್ಯವನ್ನೂ, ಸ್ಥಿತಿಯನ್ನೂ, ಘನವನ್ನೂ, ನಿನ್ನ ಶತ್ರುಗಳ ಪ್ರಾಣವನ್ನೂ ಕೇಳದೆ ಮತ್ತು ಹೆಚ್ಚಾದ ದಿವಸಗಳನ್ನೂ ನೀನು ಕೇಳದೆ, ನಾನು ಯಾರ ಮೇಲೆ ನಿನ್ನನ್ನು ಅರಸನಾಗಿ ಮಾಡಿದೆನೋ, ಆ ನನ್ನ ಜನರಿಗೆ ನೀನು ನ್ಯಾಯತೀರಿಸುವ ಹಾಗೆ, ಜ್ಞಾನವನ್ನೂ, ತಿಳುವಳಿಕೆಯನ್ನೂ ನೀನು ಕೇಳಿದ್ದರಿಂದಲೂ;
12ಜ್ಞಾನ ಮತ್ತು ತಿಳುವಳಿಕೆಯನ್ನು ನಿನಗೆ ಕೊಡುತ್ತೇನೆ. ಇದಲ್ಲದೆ ನಿನಗಿಂತ ಮುಂಚೆ ಇದ್ದ ಅರಸರಲ್ಲಿ ಯಾರಿಗೂ ಇಲ್ಲದಂಥ ಮತ್ತು ನಿನ್ನ ತರುವಾಯ ಯಾರಿಗೂ ಇರದಂಥ ಐಶ್ವರ್ಯವನ್ನೂ, ಆಸ್ತಿಯನ್ನೂ, ಘನವನ್ನೂ ಕೊಡುತ್ತೇನೆ,” ಎಂದರು.
13ತರುವಾಯ ಸೊಲೊಮೋನನು ಗಿಬ್ಯೋನಿನ ಉನ್ನತ ಸ್ಥಳದಲ್ಲಿದ್ದ ದೇವದರ್ಶನ ಗುಡಾರವನ್ನು ಬಿಟ್ಟು, ಯೆರೂಸಲೇಮಿಗೆ ಬಂದು, ಇಸ್ರಾಯೇಲನ್ನು ಆಳಿದನು.
14ಇದಲ್ಲದೆ ಸೊಲೊಮೋನನು ರಥಗಳನ್ನೂ, ರಾಹುತರನ್ನೂ ಕೂಡಿಸಿದನು. ಸಾವಿರದ ನಾನೂರು ರಥಗಳು, ಹನ್ನೆರಡು ಸಾವಿರ ಕುದುರೆಯ ರಾಹುತರು ಇದ್ದರು. ಇವುಗಳಲ್ಲಿ ಕೆಲವನ್ನು ಯೆರೂಸಲೇಮಿನಲ್ಲಿ ತನ್ನ ಬಳಿಯಲ್ಲಿಯೇ ಇರಿಸಿದನು, ಉಳಿದವುಗಳನ್ನು ರಥಗಳ ಪಟ್ಟಣಗಳಲ್ಲಿಯೂ ಇರಿಸಿದನು.
15ಅರಸನ ಕಾಲದಲ್ಲಿ ಯೆರೂಸಲೇಮಿನಲ್ಲಿ ಬೆಳ್ಳಿಬಂಗಾರವನ್ನು ಕಲ್ಲುಗಳಂತೆಯೂ, ದೇವದಾರು ಮರಗಳನ್ನು ತಗ್ಗಿನಲ್ಲಿರುವ ಅತ್ತಿಮರಗಳಂತೆಯೂ ಪರಿಗಣಿಸಲಾಯಿತು.
16ಇದಲ್ಲದೆ ಸೊಲೊಮೋನನಿಗೆ ಈಜಿಪ್ಟಿನಿಂದಲೂ ಕುವೆಯಿಂದಲೂ ಕುದುರೆಗಳು ಬರುತ್ತಿದ್ದವು. ಅರಸನ ವರ್ತಕರು ಅವುಗಳನ್ನು ಹಿಂಡುಹಿಂಡಾಗಿ ಕೊಂಡುಕೊಂಡು ಬರುತ್ತಿದ್ದರು
17ಹಾಗೆಯೇ ಈಜಿಪ್ಟಿನಿಂದ ಆರುನೂರು ಬೆಳ್ಳಿ ನಾಣ್ಯಗಳ ಕ್ರಯಕ್ಕೆ ಒಂದು ರಥವನ್ನೂ ನೂರ ಐವತ್ತು ಬೆಳ್ಳಿ ನಾಣ್ಯಗಳ ಕ್ರಯಕ್ಕೆ ಒಂದು ಕುದುರೆಯನ್ನೂ ತರಿಸುತ್ತಿದ್ದರು. ಈ ಪ್ರಕಾರ ಹಿತ್ತಿಯರ ಮತ್ತು ಅರಾಮಿನ ಅರಸುಗಳೆಲ್ಲರು ಇವರ ಮುಖಾಂತರವಾಗಿಯೇ ತರಿಸುತ್ತಿದ್ದರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.