Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ತಿಮೊಥೆಯನಿಗೆ 3

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಸಭೆಯ ಮೇಲ್ವಿಚಾರಕನಾಗಲು ಬಯಸುವವನು ಒಳ್ಳೆಯ ಕೆಲಸವನ್ನು ಅಪೇಕ್ಷಿಸುವವನಾಗಿದ್ದಾನೆಂಬ ಮಾತು ನಂಬತಕ್ಕದ್ದಾಗಿದೆ.
2ಸಭೆಯ ಮೇಲ್ವಿಚಾರಕನು ನಿಂದಾರಹಿತನಾಗಿ, ಏಕಪತ್ನಿಯುಳ್ಳವನೂ ಜಿತೇಂದ್ರಿಯನೂ ಸ್ವಸ್ಥಚಿತ್ತನೂ ಗೌರವಸ್ಥನೂ ಅತಿಥಿ ಸತ್ಕಾರ ಮಾಡುವವನೂ ಬೋಧಿಸುವುದರಲ್ಲಿ ಪ್ರವೀಣನೂ ಆಗಿರಬೇಕು.
3ಅವನು ಮದ್ಯಪಾನ ಮಾಡುವವನಾಗಿರಬಾರದು, ಹೊಡೆದಾಡುವವನಾಗಿರಬಾರದು. ಆದರೆ ಸಾತ್ವಿಕನೂ ಕುತರ್ಕ ಮಾಡದವನೂ ಹಣದಾಶೆಯಿಲ್ಲದವನೂ ಆಗಿರಬೇಕು.
4ಪೂರ್ಣ ಗೌರವದಿಂದ ತನ್ನ ಮಕ್ಕಳನ್ನು ಅಧೀನದಲ್ಲಿಟ್ಟುಕೊಂಡು ಸ್ವಂತ ಮನೆಯವರನ್ನು ಚೆನ್ನಾಗಿ ಆಳುವವನಾಗಿರಬೇಕು.
5ಸ್ವಂತ ಮನೆಯವರನ್ನು ಆಳುವುದಕ್ಕೆ ತಿಳಿಯದವನು ದೇವರ ಸಭೆಯನ್ನು ಹೇಗೆ ಪರಾಮರಿಸುವನು?
6ಅವನು ಹೊಸದಾಗಿ ವಿಶ್ವಾಸಕ್ಕೆ ಬಂದವನಾಗಿರಬಾರದು. ಅಂಥವನಾದರೆ ಉಬ್ಬಿಕೊಂಡು ಸೈತಾನನ ಶಿಕ್ಷಾವಿಧಿಗೆ ಬಲಿಬೀಳುವನು.
7ಇದಲ್ಲದೆ ಅವನು ನಿಂದೆಗೆ ಗುರಿಯಾಗದವನೂ ಸೈತಾನನ ಉರುಲಿಗೆ ಸಿಕ್ಕಿ ಬೀಳದವನೂ ಆಗಿದ್ದಾನೆಂಬ ಒಳ್ಳೆಯ ಸಾಕ್ಷಿಯನ್ನು ಹೊಂದಿದವನಾಗಿರಬೇಕು.
8ಅದೇ ರೀತಿಯಾಗಿ ಸಭಾಸೇವಕರು ಗೌರವವುಳ್ಳವರಾಗಿರಬೇಕು. ಅವರು ಎರಡು ನಾಲಿಗೆಯುಳ್ಳವರಾಗಿರಬಾರದು. ಮದ್ಯಾಸಕ್ತರೂ ನೀಚಲಾಭವನ್ನು ಅಪೇಕ್ಷಿಸುವವರೂ ಆಗಿರದೆ
9ನಂಬಿಕೆಯ ರಹಸ್ಯವನ್ನು ಶುದ್ಧಮನಸ್ಸಾಕ್ಷಿಯಿಂದ ಹಿಡಿದುಕೊಂಡವರಾಗಿರಬೇಕು.
10ಇದಲ್ಲದೆ ಇವರು ಸಹ ಮೊದಲು ಪರೀಕ್ಷೆಗೊಳಪಡಬೇಕು. ಅವರು ನಿಂದಾರಹಿತರಾಗಿ ಕಂಡು ಬಂದರೆ ಸಭಾ ಹಿರಿಯರಾಗಿ ಸೇವೆಮಾಡಲಿ.
11ಹಾಗೆಯೇ ಅವರ ಹೆಂಡತಿಯರು ಗೌರವವುಳ್ಳವರಾಗಿರಬೇಕು. ಚಾಡಿ ಹೇಳದವರೂ ಸ್ವಸ್ಥ ಬುದ್ಧಿಯುಳ್ಳವರೂ ಎಲ್ಲಾ ವಿಷಯಗಳಲ್ಲಿ ನಂಬಿಗಸ್ತರೂ ಆಗಿರತಕ್ಕದ್ದು.
12ಸಭಾಸೇವಕರು ಏಕಪತ್ನಿಯುಳ್ಳವರೂ ತಮ್ಮ ಮಕ್ಕಳನ್ನೂ ಮನೆಯವರನ್ನೂ ಚೆನ್ನಾಗಿ ಆಳುವವರೂ ಆಗಿರಬೇಕು.
13ಸಭಾ ಹಿರಿಯರಾಗಿ ಚೆನ್ನಾಗಿ ಸೇವೆ ಮಾಡಿದವರು ತಮಗೆ ಒಳ್ಳೆಯ ಸ್ಥಿತಿಯನ್ನೂ, ಕ್ರಿಸ್ತ ಯೇಸುವಿನಲ್ಲಿರುವ ವಿಶ್ವಾಸದಲ್ಲಿ ಬಹು ಧೈರ್ಯವನ್ನೂ ಸಂಪಾದಿಸಿಕೊಳ್ಳುತ್ತಾರೆ. ಪೌಲನ ಸೂಚನೆಗಳಿಗೆ ಕಾರಣಗಳು
14ನಾನು ನಿನ್ನ ಬಳಿಗೆ ಬೇಗನೆ ಬರುವೆನೆಂಬ ನಿರೀಕ್ಷೆಯಿಂದಲೇ ನಿನಗೆ ಈ ವಿಷಯಗಳನ್ನು ಬರೆದಿದ್ದೇನೆ.
15ಒಂದು ವೇಳೆ ನಾನು ತಡ ಮಾಡಿದರೂ ಸತ್ಯಕ್ಕೆ ಸ್ತಂಭವೂ ಆಧಾರವೂ ಆಗಿರುವ ದೇವರ ಮನೆಯಲ್ಲಿ ಎಂದರೆ ಜೀವಸ್ವರೂಪರಾದ ದೇವರ ಸಭೆಯಲ್ಲಿ ನಡೆದುಕೊಳ್ಳಬೇಕಾದ ರೀತಿಯು ನಿನಗೆ ಗೊತ್ತಾಗಿರಬೇಕು.
16ಎಲ್ಲಾ ಪ್ರಶ್ನೆಗಳಿಂದ ಹೆಚ್ಚಾಗಿ ದೈವ ಭಕ್ತಿಯ ರಹಸ್ಯವು ದೊಡ್ಡದಾದದ್ದು ಅದು ಯಾವುದೆಂದರೆ: “ದೇವರು ಮನುಷ್ಯ ರೂಪದಲ್ಲಿ ಪ್ರತ್ಯಕ್ಷರಾದರು. ಆತ್ಮದಲ್ಲಿ ರುಜುಪಡಿಸಲಾದರು. ದೂತರಿಗೆ ಕಾಣಿಸಿಕೊಂಡರು, ಯೆಹೂದ್ಯರಲ್ಲದವರಿಗೆ ಸಾರಲಾದರು, ಲೋಕದಲ್ಲಿ ನಂಬಲಾದರು, ಮಹಿಮೆಗೆ ಒಯ್ಯಲಾದರು!”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.