Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಸಮುಯೇಲ 28

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಆ ದಿವಸಗಳಲ್ಲಿ ಫಿಲಿಷ್ಟಿಯರು ಇಸ್ರಾಯೇಲರ ಮೇಲೆ ಯುದ್ಧಮಾಡಲು ತಮ್ಮ ಸೈನ್ಯಗಳನ್ನು ಕೂಡಿಸಿಕೊಂಡರು. ಆಗ ಆಕೀಷನು ದಾವೀದನಿಗೆ, “ನೀನೂ, ನಿನ್ನ ಜನರೂ ಯುದ್ಧವನ್ನು ಮಾಡಲು ನಮ್ಮ ಸಂಗಡ ನಿಶ್ಚಯವಾಗಿ ಬರಬೇಕೆಂದು ತಿಳಿಯಲಿಲ್ಲವೋ?” ಎಂದನು.
2ದಾವೀದನು ಆಕೀಷನಿಗೆ, “ನಿಶ್ಚಯವಾಗಿ ನಿನ್ನ ದಾಸನು ಮಾಡುವುದನ್ನು ನೀನೇ ತಿಳಿದುಕೊಳ್ಳುವಿ,” ಎಂದನು. ಆಕೀಷನು ದಾವೀದನಿಗೆ, “ಎಂದೆಂದಿಗೂ ನಾನು ನಿನ್ನನ್ನು ಕಾವಲುಗಾರನಾಗಿ ಮಾಡುವೆನು,” ಎಂದನು. ಸೌಲ ಹಾಗು ಎಂದೋರಿನ ಮಾಂತ್ರಿಕಳು
3ಸಮುಯೇಲನು ಮರಣಹೊಂದಿದನು. ಇಸ್ರಾಯೇಲರೆಲ್ಲರು ಅವನಿಗೋಸ್ಕರ ಗೋಳಾಡಿ, ಅವನ ಸ್ವಂತ ಪಟ್ಟಣವಾದ ರಾಮದಲ್ಲಿ ಅವನನ್ನು ಹೂಳಿಟ್ಟರು. ಇದಲ್ಲದೆ ಸೌಲನು ಮಾಂತ್ರಿಕಳನ್ನೂ, ಭೂತಪ್ರೇತಗಳನ್ನು ಆರಾಧಿಸುವವರನ್ನೂ ದೇಶದಲ್ಲಿಂದ ಹೊರಡಿಸಿದ್ದನು.
4ಆಗ ಫಿಲಿಷ್ಟಿಯರ ಸೈನ್ಯ ಕೂಡಿಬಂದು ಶೂನೇಮಿನಲ್ಲಿ ದಂಡಿಳಿದರು. ಸೌಲನು ಸಮಸ್ತ ಇಸ್ರಾಯೇಲನ್ನು ಕೂಡಿಸಿಕೊಂಡು ಗಿಲ್ಬೋವದಲ್ಲಿ ದಂಡಿಳಿದನು.
5ಸೌಲನು ಫಿಲಿಷ್ಟಿಯರ ಸೈನ್ಯವನ್ನು ಕಂಡು ಭಯಪಟ್ಟನು. ಆತನ ಹೃದಯದಲ್ಲಿ ಭಯತುಂಬಿತು.
6ಸೌಲನು ಯೆಹೋವ ದೇವರನ್ನು ಕೇಳಿಕೊಂಡಾಗ, ಯೆಹೋವ ದೇವರು ಅವನಿಗೆ ಸ್ವಪ್ನಗಳಿಂದಲಾದರೂ, ಊರೀಮಿನಿಂದಲಾದರೂ, ಪ್ರವಾದಿಗಳಿಂದಲಾದರೂ ಉತ್ತರ ಕೊಡಲಿಲ್ಲ.
7ಆಗ ಸೌಲನು ತನ್ನ ದಾಸರಿಗೆ, “ನಾನು ವಿಚಾರಿಸುವಂತೆ ಮಾಂತ್ರಿಕಳಾದ ಒಬ್ಬ ಸ್ತ್ರೀಯನ್ನು ವಿಚಾರಿಸಿರಿ,” ಎಂದನು. ಅವನ ದಾಸರು ಅವನಿಗೆ, “ಇಗೋ, ಎಂದೋರಿನಲ್ಲಿ ಮಾಂತ್ರಿಕಳಾದ ಒಬ್ಬ ಸ್ತ್ರೀ ಇದ್ದಾಳೆ,” ಎಂದರು.
8ಆಗ ಸೌಲನು ತನ್ನನ್ನು ಮರೆಮಾಡಿಕೊಳ್ಳುವಂತೆ ಬದಲು ವಸ್ತ್ರಗಳನ್ನು ಧರಿಸಿ, ತನ್ನ ಸಂಗಡ ಇಬ್ಬರನ್ನು ಕರೆದುಕೊಂಡು, ರಾತ್ರಿಯಲ್ಲಿ ಆ ಸ್ತ್ರೀಯ ಬಳಿಗೆ ಬಂದು ಅವಳಿಗೆ, “ನೀನು ದಯಮಾಡಿ ಸತ್ತವರ ಆತ್ಮವನ್ನು ವಿಚಾರಿಸಿ ನನಗೆ ಕಣಿ ಹೇಳು. ನಾನು ನಿನಗೆ ಹೇಳುವವನನ್ನು ನನಗೆ ಕಾಣುವಂತೆ ಮಾಡು,” ಎಂದನು.
9ಆ ಸ್ತ್ರೀಯು ಅವನಿಗೆ, “ಸೌಲನು ಮಾಂತ್ರಿಕಳನ್ನೂ, ಭೂತಪ್ರೇತಗಳನ್ನು ಆರಾಧಿಸುವವರನ್ನೂ ದೇಶದಿಂದ ತೆಗೆದುಬಿಟ್ಟನೆಂದು ನೀನು ಬಲ್ಲೆ. ಈಗ ನಾನು ಸಾಯುವುದಕ್ಕೆ ಕಾರಣವಾಗುವ ಹಾಗೆ ಏಕೆ ನನ್ನ ಪ್ರಾಣಕ್ಕೆ ಉರುಳಿಡುತ್ತಿ?” ಎಂದಳು.
10ಆಗ ಸೌಲನು, “ಯೆಹೋವ ದೇವರ ಜೀವದಾಣೆ, ಈ ಕಾರ್ಯಕ್ಕೋಸ್ಕರ ನಿನಗೆ ದಂಡನೆ ಬರುವುದಿಲ್ಲ,” ಎಂದು ಅವಳಿಗೆ ಯೆಹೋವ ದೇವರ ಮೇಲೆ ಪ್ರಮಾಣ ಮಾಡಿದನು.
11ಅವಳು, “ನಿನಗೆ ನಾನು ಯಾರನ್ನು ಇಲ್ಲಿ ಬರಮಾಡಬೇಕು?” ಎಂದಳು. ಅದಕ್ಕವನು, “ಸಮುಯೇಲನನ್ನು ಬರಮಾಡು,” ಎಂದನು.
12ಆ ಸ್ತ್ರೀಯು ಸಮುಯೇಲನನ್ನು ಕಂಡಾಗ ಮಹಾಶಬ್ದದಿಂದ ಕೂಗಿದಳು. ಆ ಸ್ತ್ರೀಯು, “ಏಕೆ ನನ್ನನ್ನು ಮೋಸಮಾಡಿದಿ? ನೀನೇ ಸೌಲನು,” ಎಂದಳು.
13ಅರಸನು ಅವಳಿಗೆ, “ಭಯಪಡಬೇಡ, ನೀನು ಕಂಡದ್ದೇನು?” ಎಂದನು. ಆಗ ಸ್ತ್ರೀಯು ಸೌಲನಿಗೆ, “ಒಂದು ಆತ್ಮವು ಭೂಮಿಯಿಂದ ಎದ್ದು ಬರುವುದನ್ನು ಕಂಡೆನು,” ಎಂದಳು.
14ಆಗ ಅವನು, “ಅವನ ರೂಪ ಹೇಗಿದೆ?” ಎಂದು ಅವಳನ್ನು ಕೇಳಿದನು. ಅವಳು, “ನಿಲುವಂಗಿಯನ್ನು ಹೊದ್ದಿರುವ ಮುದಿ ಪ್ರಾಯದವನಾದ ಒಬ್ಬ ಮನುಷ್ಯನು ಬರುತ್ತಿದ್ದಾನೆ,” ಎಂದಳು. ಅವನು ಸಮುಯೇಲನು ಎಂದು ಸೌಲನು ತಿಳಿದುಕೊಂಡು, ನೆಲದ ಮಟ್ಟಿಗೂ ಬಾಗಿ ಅಡ್ಡಬಿದ್ದನು.
15ಆಗ ಸಮುಯೇಲನು ಸೌಲನಿಗೆ, “ನೀನು ನನ್ನನ್ನು ಇಲ್ಲಿ ಬರಮಾಡಿ ವಿಶ್ರಾಂತಿ ಕೆಡಿಸಿದೆ,” ಎಂದನು. ಅದಕ್ಕೆ ಸೌಲನು, “ನಾನು ಬಹಳ ಇಕ್ಕಟ್ಟಿನಲ್ಲಿದ್ದೇನೆ. ಏಕೆಂದರೆ ಫಿಲಿಷ್ಟಿಯರು ನನಗೆ ವಿರೋಧವಾಗಿ ಯುದ್ಧಮಾಡುತ್ತಾರೆ. ಆದರೆ ದೇವರು ನನ್ನನ್ನು ಬಿಟ್ಟುಹೋದರು. ಅವರು ಪ್ರವಾದಿಗಳ ಮುಖಾಂತರವಾದರೂ, ಸ್ವಪ್ನದ ಮುಖಾಂತರವಾದರೂ ನನಗೆ ಉತ್ತರ ಕೊಡಲಿಲ್ಲ. ಆದ್ದರಿಂದ ನಾನು ಮಾಡಬೇಕಾದದ್ದನ್ನು ನೀನು ತಿಳಿಸುವ ಹಾಗೆ ನಿನ್ನನ್ನು ಕರೆಸಿದೆನು,” ಎಂದನು.
16ಸಮುಯೇಲನು ಅವನಿಗೆ, “ಯೆಹೋವ ದೇವರು ನಿನ್ನನ್ನು ಬಿಟ್ಟು ಹೋಗಿ ನಿನಗೆ ಶತ್ರುವಾಗಿರುವಾಗ, ನೀನು ನನ್ನನ್ನು ಕೇಳುವುದು ಏಕೆ?
17ಯೆಹೋವ ದೇವರು ನನ್ನ ಮುಖಾಂತರ ಹೇಳಿದ ಹಾಗೆಯೇ ನಿನಗೆ ಮಾಡಿದ್ದಾರೆ. ಯೆಹೋವ ದೇವರು ರಾಜ್ಯವನ್ನು ನಿನ್ನ ಕೈಯಿಂದ ತೆಗೆದುಕೊಂಡು, ಅದನ್ನು ನಿನ್ನ ನೆರೆಯವನಾದ ದಾವೀದನಿಗೆ ಕೊಟ್ಟರು.
18ನೀನು ಯೆಹೋವ ದೇವರ ಮಾತನ್ನು ಕೇಳದೆ, ಅಮಾಲೇಕ್ಯರ ಮೇಲೆ ಇದ್ದ ಅವರ ಉಗ್ರಕೋಪವನ್ನು ತೀರಿಸದೆ ಹೋದದ್ದರಿಂದ, ಯೆಹೋವ ದೇವರು ಈ ದಿವಸದಲ್ಲಿ ನಿನಗೆ ಹೀಗೆ ಮಾಡಿದರು.
19ಯೆಹೋವ ದೇವರು ನಿನ್ನ ಸಹಿತವಾಗಿ ಇಸ್ರಾಯೇಲನ್ನು ಫಿಲಿಷ್ಟಿಯರ ಕೈಯಲ್ಲಿ ಒಪ್ಪಿಸಿಕೊಡುವರು. ನಾಳೆ ನೀನೂ, ನಿನ್ನ ಪುತ್ರರೂ ನನ್ನ ಸಂಗಡ ಇರುವಿರಿ. ಯೆಹೋವ ದೇವರು ಇಸ್ರಾಯೇಲ್ ಸೈನ್ಯವನ್ನು ಫಿಲಿಷ್ಟಿಯರ ಕೈಯಲ್ಲಿ ಒಪ್ಪಿಸಿಕೊಡುವರು,” ಎಂದನು.
20ಆಗ ಸೌಲನು ನೆಲದ ಮೇಲೆ ಬೋರಲು ಬಿದ್ದು, ಸಮುಯೇಲನ ಮಾತುಗಳಿಗೋಸ್ಕರ ಬಹಳವಾಗಿ ಭಯಪಟ್ಟನು. ಆ ದಿನವೆಲ್ಲಾ ಏನೂ ಊಟಮಾಡದೆ ಇದ್ದುದರಿಂದ ಅವನೊಳಗೆ ಶಕ್ತಿ ಇಲ್ಲದೆ ಹೋಯಿತು.
21ಆಗ ಆ ಸ್ತ್ರೀಯು ಸೌಲನ ಬಳಿಗೆ ಬಂದು, ಅವನು ಬಹಳ ತಲ್ಲಣಪಟ್ಟನೆಂದು ಕಂಡು ಅವನಿಗೆ, “ನಿನ್ನ ದಾಸಿಯಾದ ನಾನು ನಿನ್ನ ಮಾತನ್ನು ಕೇಳಿ, ನನ್ನ ಪ್ರಾಣವನ್ನು ನನ್ನ ಕೈಯಲ್ಲಿ ಇಟ್ಟುಕೊಂಡವಳಾಗಿ, ನೀನು ನನಗೆ ಹೇಳಿದ ಮಾತುಗಳನ್ನು ಕೇಳಿದೆನು.
22ಆದ್ದರಿಂದ ಈಗ ನೀನು ನಿನ್ನ ದಾಸಿಯ ಮಾತನ್ನು ಕೇಳಿ, ನೀನು ಮಾರ್ಗ ಹಿಡಿದು ನಡೆಯುವಾಗ ನಿನಗೆ ಶಕ್ತಿ ಇರುವ ಹಾಗೆ ನಾನು ನಿನಗೆ ಕೊಡುವ ಆಹಾರವನ್ನು ಊಟಮಾಡು,” ಎಂದಳು.
23ಅದಕ್ಕವನು, “ನಾನು ತಿನ್ನುವುದಿಲ್ಲ,” ಎಂದನು. ಆದರೆ ಅವನ ದಾಸರೂ, ಆ ಸ್ತ್ರೀಯೂ ಅವನನ್ನು ಬಲವಂತ ಮಾಡಿದ್ದರಿಂದ, ಅವನು ಅವರ ಮಾತನ್ನು ಕೇಳಿ, ನೆಲವನ್ನು ಬಿಟ್ಟು ಎದ್ದು, ಮಂಚದ ಮೇಲೆ ಕುಳಿತುಕೊಂಡನು.
24ಆ ಸ್ತ್ರೀಯ ಮನೆಯಲ್ಲಿ ಒಂದು ಕೊಬ್ಬಿದ ಕರುವು ಇತ್ತು. ಅವಳು ಅದನ್ನು ತ್ವರೆಯಾಗಿ ಕೊಯ್ದು, ಹಿಟ್ಟನ್ನು ನಾದಿ ಹುಳಿಯಿಲ್ಲದ ರೊಟ್ಟಿಗಳನ್ನು ಸುಟ್ಟು,
25ಸೌಲನ ಮುಂದೆ ಮತ್ತು ಅವನ ದಾಸರ ಮುಂದೆ ತಂದಿಟ್ಟಳು. ಅವರು ಊಟಮಾಡಿ ಆ ರಾತ್ರಿಯಲ್ಲೇ ಹೊರಟು ಹೋದರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.