Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಸಮುಯೇಲ 24

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಆಗ ಸೌಲನು ಫಿಲಿಷ್ಟಿಯರನ್ನು ಹಿಂದಟ್ಟಿ ತಿರುಗಿ ಬಂದಾಗ, “ದಾವೀದನು ಏನ್ಗೆದಿ ಮರುಭೂಮಿಯಲ್ಲಿ ಇದ್ದಾನೆ,” ಎಂದು ಅವನಿಗೆ ತಿಳಿದುಬಂದಿತು.
2ಆಗ ಸೌಲನು ಸಮಸ್ತ ಇಸ್ರಾಯೇಲಿನಲ್ಲಿ ಶ್ರೇಷ್ಠರಾದ ಮೂರು ಸಾವಿರ ಸೈನಿಕರನ್ನು ತೆಗೆದುಕೊಂಡು ದಾವೀದನನ್ನೂ, ಅವನ ಜನರನ್ನೂ ಹುಡುಕಲು ಕಾಡುಮೇಕೆಗಳಿರುವ ಬಂಡೆಗಳಿಗೆ ಹೋದನು.
3ಸೌಲನು ಮಾರ್ಗದಲ್ಲಿ ಕುರಿಹಟ್ಟಿಗಳು ಇರುವ ಗವಿಯ ಬಳಿಗೆ ಬಂದು, ಅದರಲ್ಲಿ ಅವನು ಶೌಚಕ್ಕಾಗಿ ಹೋದನು. ಆದರೆ ದಾವೀದನೂ, ಅವನ ಜನರೂ ಅದೇ ಗವಿಯ ಹಿಂದೆ ಅಡಗಿಕೊಂಡಿದ್ದರು.
4ಆಗ ದಾವೀದನ ಜನರು ಅವನಿಗೆ, “ ‘ನಾನು ನಿನ್ನ ಶತ್ರುವನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು. ಆಗ ನೀನು ನಿನ್ನ ಇಷ್ಟಾನುಸಾರ ಅವನಿಗೆ ಮಾಡಬಹುದು,’ ಎಂದು ಯೆಹೋವ ದೇವರು ನಿನಗೆ ಹೇಳಿದ ದಿನವು ಇದೇ,” ಎಂದರು. ಆಗ ದಾವೀದನು ಎದ್ದು ಹೋಗಿ ರಹಸ್ಯವಾಗಿ ಸೌಲನ ನಿಲುವಂಗಿಯ ಮೂಲೆಯನ್ನು ಕತ್ತರಿಸಿಕೊಂಡನು.
5ಆದರೆ ಹಾಗೆ ಮಾಡಿದ ಮೇಲೆ, ಸೌಲನ ನಿಲುವಂಗಿಯ ಅಂಚನ್ನು ಕತ್ತರಿಸಿಕೊಂಡದ್ದರಿಂದ ದಾವೀದನ ಮನಃಸ್ಸಾಕ್ಷಿ ಅವನನ್ನು ಹಂಗಿಸತೊಡಗಿತು.
6ದಾವೀದನು ತನ್ನ ಜನರಿಗೆ, “ಅವನು ಯೆಹೋವ ದೇವರ ಅಭಿಷಿಕ್ತನಾದದರಿಂದ ನನ್ನ ಕೈ ಅವನಿಗೆ ವಿರೋಧವಾಗಿ ಚಾಚಿ, ನನ್ನ ಒಡೆಯನಿಗೆ ಈ ಕಾರ್ಯ ಮಾಡುವುದನ್ನು ಯೆಹೋವ ದೇವರು ತಡೆಯಲಿ,” ಎಂದನು.
7ಹೀಗೆಯೇ ದಾವೀದನು ತನ್ನ ಜನರನ್ನು ಸೌಲನ ಮೇಲೆ ಬೀಳಗೊಡದೆ, ಈ ಮಾತುಗಳಿಂದ ಅವರನ್ನು ನಿಲ್ಲಿಸಿದನು. ಸೌಲನು ಎದ್ದು ಗವಿಯನ್ನು ಬಿಟ್ಟು, ಹೊರಗೆ ನಡೆದು ಹೋದನು.
8ತರುವಾಯ ದಾವೀದನು ಎದ್ದು ಗವಿಯಿಂದ ಹೊರಗೆ ಬಂದು ಸೌಲನಿಗೆ, “ಅರಸನೇ, ನನ್ನ ಒಡೆಯನೇ,” ಎಂದು ಕೂಗಿದನು. ಸೌಲನು ಹಿಂದಿರುಗಿ ನೋಡಿದಾಗ, ದಾವೀದನು ನೆಲದವರೆಗೆ ಬಗ್ಗಿ ವಂದಿಸಿದನು.
9ಸೌಲನಿಗೆ ದಾವೀದನು, “ಇಗೋ, ದಾವೀದನು ನಿನಗೆ ಕೇಡು ಮಾಡಲು ಹುಡುಕುತ್ತಾನೆಂದು ಹೇಳುವ ಮನುಷ್ಯರ ಮಾತುಗಳನ್ನು ಏಕೆ ಕೇಳುತ್ತಿದ್ದೀ?
10ಯೆಹೋವ ದೇವರು ಈ ಗವಿಯಲ್ಲಿ ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟರೆಂಬುದನ್ನು ಈ ದಿನ ನಿನ್ನ ಕಣ್ಣುಗಳು ಕಂಡವು. ಕೆಲವರು ನಿನ್ನನ್ನು ಕೊಂದುಹಾಕಲು ನನಗೆ ಒತ್ತಾಯಮಾಡಿದರು. ಆದರೆ ನಾನು ಅವರಿಗೆ, ‘ಅರಸನು ಯೆಹೋವ ದೇವರ ಅಭಿಷಿಕ್ತನು. ಆದುದರಿಂದ ನಾನು ನನ್ನ ಒಡೆಯನಿಗೆ ವಿರೋಧವಾಗಿ ಕೈಯೆತ್ತುವುದಿಲ್ಲ’ ಎಂದು ಹೇಳಿ ನಿನ್ನನ್ನು ಉಳಿಸಿದೆ.
11ಇದಲ್ಲದೆ ನನ್ನ ತಂದೆಯೇ, ಇಲ್ಲಿ ನೋಡು! ನನ್ನ ಕೈಯಲ್ಲಿರುವ ನಿನ್ನ ನಿಲುವಂಗಿಯ ತುಂಡನ್ನು ನೋಡು. ನಾನು ನಿನ್ನನ್ನು ಕೊಂದುಹಾಕದೆ, ನಿನ್ನ ನಿಲುವಂಗಿಯ ಅಂಚನ್ನು ಮಾತ್ರ ಕತ್ತರಿಸಿಕೊಂಡದ್ದರಿಂದ, ನನ್ನಲ್ಲಿ ಕೆಟ್ಟತನವೂ, ದ್ರೋಹವೂ ಇಲ್ಲವೆಂದು ಇದು ಸೂಚಿಸುತ್ತಿದೆ; ನಾನು ನಿನಗೆ ವಿರೋಧವಾಗಿ ತಪ್ಪುಮಾಡಲಿಲ್ಲವೆಂದು ತಿಳಿದುಕೋ. ಹೀಗಿದ್ದರೂ, ನೀನು ನನ್ನ ಪ್ರಾಣವನ್ನು ತೆಗೆಯಲು ಬೇಟೆಯಾಡುತ್ತೀ.
12ಯೆಹೋವ ದೇವರು ನನ್ನ ನಿನ್ನ ಮಧ್ಯದಲ್ಲಿ ನ್ಯಾಯತೀರಿಸಲಿ. ಹೌದು, ಯೆಹೋವ ದೇವರು ತಾವೇ ನನಗೋಸ್ಕರ ನಿನ್ನ ವಿಷಯವಾಗಿ ಮುಯ್ಯಿಗೆ ಮುಯ್ಯಿ ಮಾಡಲಿ. ಆದರೆ ನಾನು ನಿನ್ನ ಮೇಲೆ ನನ್ನ ಕೈಯೆತ್ತುವುದಿಲ್ಲ.
13ಪೂರ್ವಿಕರು ಹೇಳಿದ ಸಾಮತಿಯ ಪ್ರಕಾರ, ‘ದುಷ್ಟರಿಂದ ದುಷ್ಟತ್ವವು ಹುಟ್ಟುವುದು’ ಆದರೂ ನಾನು ನಿನಗೆ ವಿರೋಧವಾಗಿ ನನ್ನ ಕೈ ಮುಟ್ಟುವುದಿಲ್ಲ.
14“ಇಸ್ರಾಯೇಲಿನ ಅರಸನು ಯಾರನ್ನು ಹಿಂದಟ್ಟಿ ಹೊರಟನು? ಯಾರನ್ನು ಹಿಂದಟ್ಟುತ್ತೀ? ಸತ್ತ ನಾಯಿಯನ್ನೇ? ಒಂದು ನೊಣವನ್ನೇ?
15ಯೆಹೋವ ದೇವರು ನ್ಯಾಯಾಧಿಪತಿಯಾಗಿದ್ದು ನನಗೂ ನಿನಗೂ ನ್ಯಾಯತೀರಿಸಿ, ನನ್ನ ಪರವಾಗಿ ವಾದಿಸಿ, ನನ್ನನ್ನು ನಿನ್ನ ಕೈಯಿಂದ ತಪ್ಪಿಸಿಬಿಡಲಿ,” ಎಂದನು.
16ದಾವೀದನ ಮಾತುಗಳು ಮುಗಿದ ನಂತರ, ಸೌಲನು ದಾವೀದನಿಗೆ, “ದಾವೀದನೇ, ನನ್ನ ಮಗನೇ, ಇದು ನಿನ್ನ ಸ್ವರವೋ?” ಎಂದು ಗಟ್ಟಿಯಾಗಿ ಅತ್ತನು.
17ಇದಲ್ಲದೆ ಅವನು ದಾವೀದನಿಗೆ, “ನೀನು ನನಗಿಂತ ನೀತಿವಂತನು. ನಾನು ನಿನಗೆ ಕೇಡನ್ನು ಮಾಡಿದರೂ, ನೀನು ನನಗೆ ಒಳ್ಳೆಯದನ್ನು ಮಾಡಿದೆ.
18ಯೆಹೋವ ದೇವರು ನನ್ನನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಾಗ, ನೀನು ನನ್ನನ್ನು ಕೊಂದುಹಾಕದೆ ಇದ್ದುದರಿಂದ, ನೀನು ನನಗೆ ಉಪಕಾರ ಮಾಡಿದ್ದನ್ನು ಈ ಹೊತ್ತು ತೋರಿಸಿದೆ.
19ಏಕೆಂದರೆ ಯಾವನಾದರೂ ತನ್ನ ಶತ್ರುವನ್ನು ಹಿಡಿದುಕೊಂಡರೆ, ಅವನನ್ನು ಸುರಕ್ಷಿತನಾಗಿ ಬಿಟ್ಟುಬಿಡುವನೋ? ಈ ಹೊತ್ತು ನೀನು ನನಗೆ ಒಳ್ಳೆಯದನ್ನು ಮಾಡಿದ್ದರಿಂದ ಯೆಹೋವ ದೇವರು ನಿನಗೆ ಒಳ್ಳೆಯದನ್ನು ಮಾಡಲಿ.
20ಈಗ ಇಗೋ, ನೀನು ನಿಶ್ಚಯವಾಗಿ ಅರಸನಾಗುವೆ ಎಂದೂ, ಇಸ್ರಾಯೇಲಿನ ರಾಜ್ಯವು ನಿನ್ನ ಕೈಯಲ್ಲಿ ಸ್ಥಿರವಾಗುವುದೆಂದೂ ನಾನು ಚೆನ್ನಾಗಿ ಬಲ್ಲೆನು.
21ಆದ್ದರಿಂದ ನೀನು ನನ್ನ ತರುವಾಯ ನನ್ನ ಸಂತಾನವನ್ನು ಕಡಿದುಬಿಡುವುದಿಲ್ಲವೆಂದೂ, ನನ್ನ ಗೋತ್ರದಿಂದ ನನ್ನ ಹೆಸರನ್ನು ತೆಗೆದುಹಾಕುವುದಿಲ್ಲವೆಂದೂ ನನಗೆ ಯೆಹೋವ ದೇವರ ಹೆಸರಿನಲ್ಲಿ ಪ್ರಮಾಣಮಾಡು,” ಎಂದನು.
22ಹಾಗೆಯೇ ದಾವೀದನು ಸೌಲನಿಗೆ ಪ್ರಮಾಣ ಮಾಡಿದನು. ಆಗ ಸೌಲನು ತನ್ನ ಮನೆಗೆ ಹೋದನು. ಆದರೆ ದಾವೀದನೂ ಅವನ ಮನುಷ್ಯರೂ ಆಶ್ರಯಗಿರಿಗೆ ಏರಿಹೋದರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.