Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಸಮುಯೇಲ 1

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಎಫ್ರಾಯೀಮ್ ಬೆಟ್ಟದ ಪ್ರದೇಶ ರಾಮತಾಯೀಮ್ ಚೋಫಿಮಿನಲ್ಲಿ ಎಲ್ಕಾನ ಎಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು. ಅವನು ಎಫ್ರಾಯೀಮ್ಯನಾದ ಚೂಫನ ಮೊಮ್ಮಗನೂ ತೋಹುವಿನ ಮಗನೂ ಆದ ಎಲೀಹುವಿನ ಮಗನಾದ ಯೆರೋಹಾಮನ ಮಗನಾಗಿದ್ದನು.
2ಅವನಿಗೆ ಇಬ್ಬರು ಹೆಂಡತಿಯರು. ಒಬ್ಬಳ ಹೆಸರು ಹನ್ನ, ಮತ್ತೊಬ್ಬಳ ಹೆಸರು ಪೆನಿನ್ನ. ಪೆನಿನ್ನಳಿಗೆ ಮಕ್ಕಳಿದ್ದರು. ಆದರೆ ಹನ್ನಳಿಗೆ ಮಕ್ಕಳಿರಲಿಲ್ಲ.
3ಅವನು ಶೀಲೋವಿನಲ್ಲಿ ಸೇನಾಧೀಶ್ವರ ಯೆಹೋವ ದೇವರನ್ನು ಆರಾಧಿಸಲೂ, ಅವರಿಗೆ ಬಲಿಯನ್ನು ಅರ್ಪಿಸಲೂ ಪ್ರತಿವರ್ಷ ಪಟ್ಟಣದಿಂದ ಹೋಗುತ್ತಿದ್ದನು. ಯೆಹೋವ ದೇವರ ಯಾಜಕ ಏಲಿಯ ಮಕ್ಕಳಿಬ್ಬರಾದ ಹೊಫ್ನಿಯೂ, ಫೀನೆಹಾಸನೂ ಅಲ್ಲಿ ಇದ್ದರು.
4ಎಲ್ಕಾನನು ಬಲಿ ಅರ್ಪಿಸುವ ಕಾಲದಲ್ಲಿ ಅವನು ತನ್ನ ಹೆಂಡತಿ ಪೆನಿನ್ನಳಿಗೂ, ಅವಳ ಸಮಸ್ತ ಪುತ್ರಪುತ್ರಿಯರಿಗೂ ಪಾಲನ್ನು ಕೊಡುತ್ತಿದ್ದನು.
5ಅವನು ಹನ್ನಳನ್ನು ಪ್ರೀತಿಸಿದ್ದರಿಂದ ಹನ್ನಳಿಗೆ ಎರಡಷ್ಟು ಪಾಲನ್ನು ಕೊಡುತ್ತಿದ್ದನು. ಆದರೆ ಯೆಹೋವ ದೇವರು ಹನ್ನಳ ಗರ್ಭವನ್ನು ಮುಚ್ಚಿಬಿಟ್ಟಿದ್ದರು.
6ಯೆಹೋವ ದೇವರು ಅವಳ ಗರ್ಭವನ್ನು ಮುಚ್ಚಿದ್ದರಿಂದ, ಅವಳ ಪ್ರತಿಸ್ಪರ್ಧಿಯಾದ ಪೆನಿನ್ನಳು ಹನ್ನಳಿಗೆ ಮನಗುಂದುವ ಹಾಗೆ ಬಹಳ ಕೆಣಕಿ ಬಾಧಿಸಿದಳು.
7ಹೀಗೆಯೇ ಅವನು ಪ್ರತಿ ಸಂವತ್ಸರದಲ್ಲಿಯೂ ಮಾಡುತ್ತಿದ್ದನು, ಇವಳು ಯೆಹೋವ ದೇವರ ಮನೆಗೆ ಹೋಗುತ್ತಿರುವಾಗ ಆ ರೀತಿಯಾಗಿ ಹನ್ನಳನ್ನು ಬಾಧಿಸುತ್ತಿದ್ದಳು. ಅದರಿಂದ ಹನ್ನಳು ಊಟಮಾಡದೆ ಅಳುತ್ತಾ ಇದ್ದಳು.
8ಆಗ ಅವಳ ಗಂಡ ಎಲ್ಕಾನನು ಅವಳಿಗೆ, “ಹನ್ನಳೇ, ಏಕೆ ಅಳುತ್ತೀ? ಏಕೆ ಊಟಮಾಡದೆ ಇದ್ದೀ? ನಿನ್ನ ಮನ ಏಕೆ ಕುಂದಿದೆ? ಹತ್ತು ಮಂದಿ ಪುತ್ರರಿಗಿಂತ ನಾನು ನಿನಗೆ ಹೆಚ್ಚಲ್ಲವೆ?” ಎಂದನು.
9ಅವರು ಶೀಲೋವಿನಲ್ಲಿ ಊಟಮಾಡಿದ ತರುವಾಯ ಹನ್ನಳು ಎದ್ದು ನಿಂತಳು. ಯಾಜಕನಾದ ಏಲಿ ಯೆಹೋವ ದೇವರ ಮಂದಿರದ ಸ್ತಂಭದ ಬಳಿ ಆಸನದ ಮೇಲೆ ಕುಳಿತಿರುವಾಗ,
10ಅವಳು ಬಹಳ ಮನಗುಂದಿದವಳಾಗಿ ಯೆಹೋವ ದೇವರನ್ನು ಪ್ರಾರ್ಥಿಸಿ, ಅತ್ತು ಒಂದು
11ಹರಕೆಮಾಡಿ, “ಸೇನಾಧೀಶ್ವರ ಯೆಹೋವ ದೇವರೇ, ನೀವು ನಿಶ್ಚಯವಾಗಿ ನಿಮ್ಮ ದಾಸಿಯ ದೀನತೆಯನ್ನು ಕಂಡು, ನಿಮ್ಮ ದಾಸಿಯನ್ನು ಮರೆಯದೆ, ನನ್ನನ್ನು ನೆನಸಿ, ನಿಮ್ಮ ದಾಸಿಗೆ ಗಂಡು ಮಗುವನ್ನು ಕೊಟ್ಟರೆ, ಅವನು ಬದುಕುವ ಸಕಲ ದಿವಸಗಳಲ್ಲಿ ಅವನನ್ನು ಯೆಹೋವ ದೇವರಿಗೆ ಒಪ್ಪಿಸಿಕೊಡುವೆನು. ಅವನ ತಲೆಯ ಮೇಲೆ ಕ್ಷೌರಿಕನ ಕತ್ತಿ ಬೀಳುವುದಿಲ್ಲ,” ಎಂದಳು.
12ಅವಳು ಯೆಹೋವ ದೇವರ ಮುಂದೆ ಹೆಚ್ಚಾಗಿ ಪ್ರಾರ್ಥನೆ ಮಾಡುತ್ತಿರುವಾಗ, ಏಲಿಯು ಅವಳ ಬಾಯನ್ನೇ ನೋಡುತ್ತಿದ್ದನು.
13ಹನ್ನಳು ತನ್ನ ಹೃದಯದಲ್ಲೇ ಮಾತನಾಡುತ್ತಾ, ತನ್ನ ತುಟಿಗಳನ್ನು ಮಾತ್ರ ಆಡಿಸುತ್ತಾ ಇದ್ದುದರಿಂದ ಅವಳ ಶಬ್ದವು ಕೇಳಿಸಲಿಲ್ಲ. ಆದ್ದರಿಂದ ಏಲಿಯು ಅವಳು ಅಮಲೇರಿದ್ದಾಳೆಂದು ನೆನಸಿದನು.
14ಏಲಿಯು ಅವಳಿಗೆ, “ಎಷ್ಟರವರೆಗೂ ಅಮಲೇರಿದವಳಾಗಿರುವೆ? ನಿನ್ನ ಬಳಿಯಿಂದ ನಿನ್ನ ದ್ರಾಕ್ಷಾರಸವನ್ನು ತೊರೆದುಬಿಡು,” ಎಂದನು.
15ಅದಕ್ಕೆ ಹನ್ನಳು ಅವನಿಗೆ ಉತ್ತರವಾಗಿ, “ನನ್ನ ಒಡೆಯನೇ, ಹಾಗಲ್ಲ. ನಾನು ದುಃಖದ ಆತ್ಮವುಳ್ಳ ಸ್ತ್ರೀಯಾಗಿದ್ದೇನೆ. ನಾನು ದ್ರಾಕ್ಷಾರಸವನ್ನಾದರೂ ಮದ್ಯಪಾನವನ್ನಾದರೂ ಕುಡಿದವಳಲ್ಲ. ನಾನು ಯೆಹೋವ ದೇವರ ಮುಂದೆ ನನ್ನ ಮನೋವೇದನೆಯನ್ನೆಲ್ಲಾ ತೋಡಿಕೊಳ್ಳುತ್ತಾ ಇದ್ದೇನೆ.
16ನಿನ್ನ ದಾಸಿಯನ್ನು ದುಷ್ಟಳೆಂದು ನೆನಸಬೇಡ. ನನ್ನ ಹೆಚ್ಚಾದ ಚಿಂತೆಯಿಂದಲೂ, ದುಃಖದಿಂದಲೂ ಈವರೆಗೂ ಮಾತನಾಡಿಕೊಳ್ಳುತ್ತಾ ಇದ್ದೆನು,” ಎಂದಳು.
17ಆಗ ಏಲಿಯು ಅವಳಿಗೆ, “ಸಮಾಧಾನದಿಂದ ಹೋಗು. ಇಸ್ರಾಯೇಲಿನ ದೇವರು, ಅವರಿಂದ ನೀನು ಬೇಡಿಕೊಂಡ ನಿನ್ನ ವಿಜ್ಞಾಪನೆಯಂತೆ ನಿನಗೆ ಕೊಡಲಿ,” ಎಂದನು.
18ಅದಕ್ಕವಳು, “ನಿನ್ನ ಸೇವಕಿಗೆ ನಿನ್ನ ದೃಷ್ಟಿಯಲ್ಲಿ ದಯೆ ತೋರಲಿ,” ಎಂದಳು. ಆ ಸ್ತ್ರೀಯು ಹೊರಟುಹೋಗಿ ಊಟ ಮಾಡಿದಳು. ಆಮೇಲೆ ಅವಳ ಮುಖದಲ್ಲಿ ದುಃಖವು ಕಾಣಲಿಲ್ಲ.
19ಅವರು ಉದಯದಲ್ಲಿ ಎದ್ದು, ಯೆಹೋವ ದೇವರನ್ನು ಆರಾಧಿಸಿ, ಹಿಂದಿರುಗಿಕೊಂಡು ರಾಮದಲ್ಲಿರುವ ತಮ್ಮ ಮನೆಗೆ ಬಂದರು. ಎಲ್ಕಾನನು ತನ್ನ ಹೆಂಡತಿಯಾದ ಹನ್ನಳನ್ನು ಸಂಗಮಿಸಲು, ಆಗ ಯೆಹೋವ ದೇವರು ಅವಳನ್ನು ಜ್ಞಾಪಕಮಾಡಿಕೊಂಡರು.
20ಹನ್ನಳು ಗರ್ಭವತಿಯಾಗಿ, ಕಾಲವು ಪೂರ್ತಿಯಾದ ತರುವಾಯ ಮಗನನ್ನು ಹೆತ್ತು, “ನಾನು ಇವನಿಗಾಗಿ ಯೆಹೋವ ದೇವರನ್ನು ಬೇಡಿ ಪಡೆದುಕೊಂಡೆನು,” ಎಂದು ಹೇಳಿ ಅವನಿಗೆ, ಸಮುಯೇಲ ಎಂದು ಹೆಸರಿಟ್ಟಳು. ಹನ್ನಳು ಸಮುಯೇಲನನ್ನು ಸಮರ್ಪಿಸಿದ್ದು
21ಎಲ್ಕಾನನು ಯೆಹೋವ ದೇವರಿಗೆ ಪ್ರತಿ ವರುಷದ ಬಲಿಯನ್ನೂ, ತನ್ನ ಹರಕೆಯನ್ನೂ ಸಲ್ಲಿಸುವುದಕ್ಕೆ ತನ್ನ ಮನೆಯವರೆಲ್ಲರ ಸಂಗಡ ಹೋಗುವಾಗ,
22ಹನ್ನಳು ಹೋಗದೆ ತನ್ನ ಗಂಡನಿಗೆ, “ಮಗುವು ಎದೆಹಾಲು ಕುಡಿಯುವುದನ್ನು ಬಿಡುವವರೆಗೂ ನಾನು ಬರುವುದಿಲ್ಲ. ಅವನು ಯೆಹೋವ ದೇವರ ಸನ್ನಿಧಿಯ ದರ್ಶನಕ್ಕೂ ಅಲ್ಲಿ ಎಂದೆಂದಿಗೂ ಇರುವುದಕ್ಕೂ ನಾನು ಅವನನ್ನು ಆಮೇಲೆ ತೆಗೆದುಕೊಂಡು ಬರುವೆನು,” ಎಂದಳು.
23ಅದಕ್ಕೆ ಅವಳ ಗಂಡನಾದ ಎಲ್ಕಾನನು ಅವಳಿಗೆ, “ನೀನು ನಿನಗೆ ಒಳ್ಳೆಯದಾಗಿ ತೋರುವ ಹಾಗೆ ಮಾಡು. ಅವನು ಎದೆಹಾಲು ಕುಡಿಯುವುದನ್ನು ಬಿಡುವವರೆಗೂ ಕಾದುಕೊಂಡಿರು. ಯೆಹೋವ ದೇವರು ತಮ್ಮ ವಾಕ್ಯವನ್ನು ಪೂರೈಸಲಿ,” ಎಂದನು. ಹಾಗೆಯೇ ಅವಳು ನಿಂತು ತನ್ನ ಮಗುವು ಎದೆಹಾಲು ಬಿಡುವವರೆಗೂ ಅವನಿಗೆ ಎದೆಹಾಲು ಕೊಡುತ್ತಿದ್ದಳು.
24ಅವನು ಎದೆಹಾಲು ಕುಡಿಯುವುದನ್ನು ಬಿಟ್ಟ ತರುವಾಯ, ಅವನನ್ನು ತನ್ನ ಸಂಗಡ ತೆಗೆದುಕೊಂಡು, ಮೂರು ವರ್ಷದ ಹೋರಿಯೊಂದನ್ನೂ, ಸುಮಾರು ಹದಿನಾರು ಕಿಲೋಗ್ರಾಂ ಹಿಟ್ಟನ್ನೂ, ಒಂದು ಬುದ್ದಲಿ ದ್ರಾಕ್ಷಾರಸವನ್ನೂ ತೆಗೆದುಕೊಂಡು ಶೀಲೋವಿನಲ್ಲಿರುವ ಯೆಹೋವ ದೇವರ ಮನೆಗೆ ಹೋದಳು.
25ಆಗ ಆ ಮಗುವು ಚಿಕ್ಕದಾಗಿತ್ತು. ಅವರು ಹೋರಿಯನ್ನು ಸಮರ್ಪಣೆ ಮಾಡಿದ ತರುವಾಯ, ಮಗುವನ್ನು ಏಲಿಯ ಬಳಿಗೆ ತಂದರು.
26“ನನ್ನ ಒಡೆಯನೇ, ನಿನ್ನ ಪ್ರಾಣದ ಸಾಕ್ಷಿ, ಇಲ್ಲಿ ಯೆಹೋವ ದೇವರಿಗೆ ಪ್ರಾರ್ಥನೆಮಾಡಿ, ಇಲ್ಲಿ ನಿನ್ನ ಬಳಿಯಲ್ಲಿ ನಿಂತಿದ್ದ ಸ್ತ್ರೀಯು ನಾನೇ. ಈ ಮಗುವಿಗೋಸ್ಕರ ಪ್ರಾರ್ಥನೆ ಮಾಡಿದೆನು.
27ನಾನು ಯೆಹೋವ ದೇವರಿಗೆ ವಿಜ್ಞಾಪನೆ ಮಾಡಿದ್ದನ್ನು ಅವರು ನನಗೆ ಕೊಟ್ಟರು.
28ಆದ್ದರಿಂದ ನಾನು ಅವನನ್ನು ಯೆಹೋವ ದೇವರಿಗೆ ಒಪ್ಪಿಸಿದ್ದೇನೆ. ಅವನು ಜೀವಿಸಿರುವವರೆಗೆ ಯೆಹೋವ ದೇವರಿಗೆ ಸಮರ್ಪಿತನಾಗಿರುವನು,” ಎಂದಳು. ಆಮೇಲೆ ಅವರೆಲ್ಲರೂ ಅಲ್ಲಿ ಯೆಹೋವ ದೇವರನ್ನು ಆರಾಧಿಸಿದರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.