Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಅರಸುಗಳು 7

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಇದಲ್ಲದೆ ಸೊಲೊಮೋನನು ತನ್ನ ಅರಮನೆಯನ್ನು ಹದಿಮೂರು ವರ್ಷಗಳಲ್ಲಿ ಕಟ್ಟಿಸಿ ಮುಗಿಸಿದನು.
2ಅವನು ಲೆಬನೋನಿನ ಅಡವಿಯ ಮನೆಯನ್ನು ಕಟ್ಟಿಸಿದನು. ಅದು 44 ಮೀಟರ್ ಉದ್ದ, 22 ಮೀಟರ್ ಅಗಲ, 13.5 ಮೀಟರ್ ಎತ್ತರವೂ ಆಗಿತ್ತು. ಅದು ನಾಲ್ಕು ಸಾಲು ದೇವದಾರು ಕಂಬಗಳ ಮೇಲೆ ಇತ್ತು. ದೇವದಾರು ತೊಲೆಗಳು ಕಂಬಗಳ ಮೇಲೆ ಇದ್ದವು.
3ಒಂದೊಂದು ಸಾಲು ಹದಿನೈದು ಕಂಬಗಳಾಗಿ ನಲವತ್ತೈದು ಕಂಬಗಳ ಮೇಲೆ ಇರುವ ತೊಲೆಗಳು ದೇವದಾರಿನ ಹಲಿಗೆಗಳಿಂದ ಮಾಡಿದ ಮಾಳಿಗೆಯಿತ್ತು.
4ಮೂರು ಸಾಲು ಕಿಟಕಿಗಳು ಇದ್ದವು. ಮೂರು ಸಾಲುಗಳಲ್ಲಿ ಬೆಳಕಿನ ಕಿಂಡಿಗಳಿದ್ದವು.
5ಕಿಟಕಿಗಳಲ್ಲಿ ಬಾಗಿಲುಗಳೂ, ನಿಲುವುಗಳೂ ಎಲ್ಲಾ ಚೌಕವಾಗಿದ್ದವು. ಮೂರು ಮೂರು ಸಾಲುಗಳಲ್ಲಿ ಬೆಳಕಿನ ಕಿಂಡಿಗಳು ಎದುರೆದುರಾಗಿದ್ದವು.
622 ಮೀಟರ್ ಉದ್ದವೂ, 13.5 ಮೀಟರ್ ಅಗಲವೂ ಆದ ಮಂಟಪವನ್ನು ಸ್ತಂಭಗಳಿಂದ ಮಾಡಿಸಿದನು. ಈ ಮಂಟಪವೂ, ಸ್ತಂಭಗಳೂ, ತೊಲೆಗಳೂ, ಮನೆಯ ಸ್ತಂಭಗಳಿಗೂ, ತೊಲೆಗಳಿಗೂ ಎದುರೆದುರಾಗಿದ್ದವು.
7ಅಲ್ಲಿ ನ್ಯಾಯತೀರಿಸಲು ನ್ಯಾಯಾಸನದ ಮಂಟಪವನ್ನು ಮಾಡಿ, ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೂ ದೇವದಾರುಗಳನ್ನು ಹೊದಿಸಿದನು.
8ತಾನು ವಾಸವಾಗಿರುವ ತನ್ನ ಅರಮನೆಯಲ್ಲಿ ಮಂಟಪದ ಒಳಭಾಗದಲ್ಲಿ ಈ ಕೆಲಸದ ಹಾಗೆಯೇ ಬೇರೆ ಒಂದು ಅಂಗಳವಿತ್ತು. ಇದಲ್ಲದೆ ಸೊಲೊಮೋನನು ತನ್ನ ಹೆಂಡತಿಯಾದ ಫರೋಹನ ಮಗಳಿಗೂ ಈ ಮಂಟಪದ ಹಾಗೆಯೇ ಇನ್ನೊಂದು ಮನೆಯನ್ನು ಕಟ್ಟಿಸಿದನು.
9ಇವೆಲ್ಲಾ ಒಳಗೂ, ಹೊರಗೂ ಅಸ್ತಿವಾರಗಳು ಮೊದಲುಗೊಂಡು, ಕಡೇ ವರಸೆಯವರೆಗೂ ಹೊರಗಿರುವ ದೊಡ್ಡ ಅಂಗಳದ ಮಟ್ಟಿಗೂ, ಅಳತೆಯ ಪ್ರಕಾರ ಗರಗಸದಿಂದ ಕೊಯ್ಯಲಾದ ಬೆಲೆಯುಳ್ಳ ಕೆತ್ತಿದ ಕಲ್ಲುಗಳಾಗಿದ್ದವು.
10ಅಸ್ತಿವಾರವು 4.5 ಮೀಟರ್ ಕಲ್ಲುಗಳೂ, 3.5 ಮೀಟರ್ ಕಲ್ಲುಗಳೂ ಬೆಲೆಯುಳ್ಳ ಕಲ್ಲುಗಳಾಗಿದ್ದವು. ಅವು ದೊಡ್ಡ ಕಲ್ಲುಗಳಾಗಿಯೂ ಇದ್ದವು.
11ಅದರ ಮೇಲೆ ಕೆತ್ತಿದ ಕಲ್ಲುಗಳ ಅಳತೆಯ ಪ್ರಕಾರ ಬೆಲೆಯುಳ್ಳ ಕಲ್ಲುಗಳೂ, ದೇವದಾರು ತೊಲೆಗಳೂ ಇದ್ದವು.
12ದೊಡ್ಡ ಅಂಗಳವು ಸುತ್ತಲೂ ಮೂರು ತರ ಕೆತ್ತಿದ ಕಲ್ಲುಗಳೂ, ಒಂದು ತರ ದೇವದಾರು ಮರದ ತೊಲೆಗಳೂ ಆಗಿದ್ದವು. ಯೆಹೋವ ದೇವರ ಆಲಯದ ಒಳ ಅಂಗಳಕ್ಕೂ, ಆಲಯದ ಮಂಟಪಕ್ಕೂ ಹಾಗೆಯೇ ಇದ್ದವು. ದೇವಾಲಯದ ಉಪಕರಣಗಳು
13ಅರಸನಾದ ಸೊಲೊಮೋನನು ಹೂರಾಮನನ್ನು ಟೈರಿನಿಂದ ಕರೆಕಳುಹಿಸಿದನು.
14ಇವನು ನಫ್ತಾಲಿಯ ಗೋತ್ರದವಳಾದ ಒಬ್ಬ ವಿಧವೆಯ ಮಗನು, ಅವನ ತಂದೆ ಟೈರ್ ಪಟ್ಟಣದ ಕಂಚುಗಾರನಾಗಿದ್ದನು. ಹೂರಾಮನು ಜ್ಞಾನದಿಂದಲೂ ಗ್ರಹಿಕೆಯಿಂದಲೂ ತಿಳುವಳಿಕೆಯಿಂದಲೂ ಎಲ್ಲಾ ತರಹದ ಕಂಚಿನ ಕೆಲಸವನ್ನು ಮಾಡುವ ಅನುಭವಶಾಲಿಯಾಗಿದ್ದನು. ಅವನು ಅರಸನಾದ ಸೊಲೊಮೋನನ ಬಳಿಗೆ ಬಂದು, ಅವನ ಕೆಲಸವನ್ನೆಲ್ಲಾ ಮಾಡಿದನು.
15ಅವನು ಎರಡು ಕಂಚಿನ ಸ್ತಂಭಗಳನ್ನು ಮಾಡಿದನು. ಒಂದೊಂದು ಸ್ತಂಭ 8 ಮೀಟರ್ ಉದ್ದ. ಒಂದೊಂದು ಸ್ತಂಭದ ಸುತ್ತಳತೆ 5.3 ಮೀಟರ್ ನೂಲಳತೆ ಇತ್ತು.
16ಆ ಸ್ತಂಭಗಳ ಮೇಲೆ ಇರಿಸಲು ಕಂಚಿನ ಎರಕ ಹೊಯ್ದ ಎರಡು ಕುಂಭಗಳನ್ನು ಮಾಡಿದನು. ಒಂದೊಂದು ಕುಂಭವು 2.2 ಮೀಟರ್ ಎತ್ತರವಾಗಿತ್ತು.
17ಸ್ತಂಭಗಳ ಕೊನೆಯಲ್ಲಿ ಇರುವ ಕುಂಭಗಳಿಗೆ ಜಾಲರಿಯ ಹಾಗೆ ಇರುವ ಹಣತೆಗಳೂ, ಸರಪಣಿಗಳ ಹಾಗಿರುವ ಗೊಂಡೆಗಳೂ ಇದ್ದವು. ಅವು ಒಂದೊಂದು ಕಂಬಕ್ಕೆ ಏಳು ಇದ್ದವು.
18ಸ್ತಂಭಗಳಿಗೆ ಇನ್ನೂ ಮಾಡಿದ್ದು ಹೇಗೆಂದರೆ, ಕೊನೆಯಲ್ಲಿರುವ ಕುಂಭಗಳನ್ನು ಮುಚ್ಚುವ ಹಾಗೆ ಕುಂಭಗಳೊಳಗೆ ಒಂದೊಂದರಲ್ಲಿ ಜಾಲರಿ ಕೆಲಸದ ಮೇಲೆ ಸುತ್ತಲೂ ಎರಡು ಸಾಲು ದಾಳಿಂಬೆ ಹಣ್ಣುಗಳನ್ನು ಮಾಡಿದನು.
19ಮಂಟಪದ ಮುಂದಿರುವ, ಆ ಸ್ತಂಭಗಳ ಕೊನೆಯ ಮೇಲಿರುವ ಕುಂಭಗಳು ತಾವರೆ ಪುಷ್ಪಗಳ ಕೃತಿ 2 ಮೀಟರ್ ಎತ್ತರವಾಗಿದ್ದವು.
20ಎರಡು ಸ್ತಂಭಗಳ ಮೇಲಿರುವ ಕುಂಭಗಳಲ್ಲಿ ಉನ್ನತ ಜಾಲರಿಯ ಕೃತಿಯ ಸಮೀಪದಲ್ಲಿರುವ ಅದರ ಹೊಟ್ಟೆಯ ಎದುರಾಗಿ, ಇನ್ನೂರು ದಾಳಿಂಬೆಗಳು ಸಾಲುಗಳಾಗಿ ಸುತ್ತಲೂ ಇದ್ದವು. ಮತ್ತೊಂದು ಕುಂಭಕ್ಕೂ ಹೀಗೆಯೇ ಇತ್ತು.
21ಆ ಸ್ತಂಭಗಳನ್ನು ಮಂದಿರದ ಮಂಟಪದ ಮುಂದೆ ನಿಲ್ಲಿಸಿದನು. ಅವನು ಬಲಗಡೆಯಲ್ಲಿ ನಿಲ್ಲಿಸಿದ ಸ್ತಂಭಕ್ಕೆ ಯಾಕೀನ್ ಎಂದೂ, ಎಡಗಡೆಯ ಸ್ತಂಭಕ್ಕೆ ಬೋವಾಜ್ ಎಂದೂ ಹೆಸರಿಟ್ಟನು.
22ಸ್ತಂಭಗಳ ತಲೆಯಲ್ಲಿ ತಾವರೆ ಪುಷ್ಪಗಳ ಕೆಲಸವಾಗಿತ್ತು. ಹೀಗೆ ಸ್ತಂಭಗಳ ಕೃತಿಯು ಮುಗಿಯಿತು.
23ಅನಂತರ ಅವನು ಸಮುದ್ರಪಾತ್ರೆ ಎಂದು ಕರೆಯಲಾಗುವ ಎರಕದ ದೊಡ್ಡ ಪಾತ್ರೆಯನ್ನು ಮಾಡಿಸಿದನು. ಅದು ಚಕ್ರಾಕಾರವಾಗಿ ಅಂಚಿನಿಂದ ಅಂಚಿಗೆ ಸುಮಾರು ನಾಲ್ಕು ಮೀಟರ್. ಅದರ ಎತ್ತರ ಸುಮಾರು ಎರಡು ಮೀಟರ್. ಸುತ್ತಳತೆ ಸುಮಾರು ಹದಿನಾಲ್ಕು ಮೀಟರಾಗಿತ್ತು.
24ಅದರ ಅಂಚಿನ ಕೆಳಭಾಗದಲ್ಲಿ ಅದರ ಸುತ್ತಲೂ ಅಲಂಕಾರದ ಕಾಯಿಗಳಿದ್ದವು. ಅವು ಒಂದೊಂದು ಮೀಟರಿಗೆ ಹತ್ತರಂತೆ, ಆ ಕೊಳದ ಪಾತ್ರೆಯ ಸುತ್ತಲೂ ಇದ್ದವು. ಇದು ಎರಕ ಹೊಯ್ಯುವಾಗ ಅಲಂಕಾರದ ಕಾಯಿಗಳು ಎರಡು ಸಾಲಾಗಿ ಎರಕ ಹೊಯ್ದಿದ್ದವು.
25ಅದು ಹನ್ನೆರಡು ಎತ್ತುಗಳ ಮೇಲೆ ನಿಂತಿತ್ತು. ಮೂರು ಉತ್ತರಕ್ಕೂ, ಮೂರು ಪಶ್ಚಿಮಕ್ಕೂ, ಮೂರು ದಕ್ಷಿಣಕ್ಕೂ, ಮೂರು ಪೂರ್ವಕ್ಕೂ ಮುಖಮಾಡಿಕೊಂಡಿದ್ದವು. ಆ ಕೊಳವು ಅವುಗಳ ಮೇಲೆ ಇತ್ತು. ಅವುಗಳ ಹಿಂಭಾಗಗಳೆಲ್ಲಾ ಒಳಮುಖವಾಗಿದ್ದವು.
26ಅದರ ದಪ್ಪವು ಅಂಗೈ ಅಗಲದಷ್ಟಾಗಿಯೂ, ಅದರ ಅಂಚು ಪಾತ್ರೆಯ ಅಂಚಿನ ಹಾಗೆಯೂ, ತಾವರೆ ಪುಷ್ಪದ ಹಾಗೆಯೂ ಇತ್ತು. ಅದು ನಾಲ್ವತ್ತು ನಾಲ್ಕು ಸಾವಿರ ಲೀಟರ್ ನೀರನ್ನು ಹಿಡಿಯುತ್ತಿತ್ತು.
27ಅವನು ಹತ್ತು ಕಂಚಿನ ಚಲಿಸುವ ಪೀಠಗಳನ್ನು ಮಾಡಿದನು. ಒಂದೊಂದು ಪೀಠವು 1.8 ಮೀಟರ್ ಉದ್ದವೂ, 1.8 ಮೀಟರ್ ಅಗಲವೂ, 1.4 ಮೀಟರ್ ಎತ್ತರವೂ ಆಗಿದ್ದವು.
28ಆ ಪೀಠಗಳ ಮೇಲಿರುವ ಕೆಲಸ ಹೇಗೆಂದರೆ, ಅವುಗಳಿಗೆ ಅಂಚುಗಳಿದ್ದವು. ಅವು ಅಂಚುಗಳ ಹಲಗೆಗಳ ನಡುವೆ ಇದ್ದವು.
29ಹಲಗೆಗಳ ನಡುವೆ ಇರುವ ಆ ಅಂಚುಗಳಲ್ಲಿ ಸಿಂಹಗಳೂ, ಎತ್ತುಗಳೂ, ಕೆರೂಬಿಗಳೂ ಇದ್ದವು. ಹಲಗೆಗಳ ಮೇಲ್ಭಾಗದಲ್ಲಿ ಒಂದು ಅಂಚು ಇತ್ತು. ಸಿಂಹಗಳಿಗೂ, ಎತ್ತುಗಳಿಗೂ ಕೆಳಭಾಗದಲ್ಲಿ ತೋರಣಗಳು ಅದರ ಸಂಗಡ ಇದ್ದವು.
30ಒಂದೊಂದು ಪೀಠಕ್ಕೆ ನಾಲ್ಕು ಕಂಚಿನ ಗಾಲಿಗಳೂ, ಕಂಚಿನ ಅಚ್ಚುಗಳೂ ಇದ್ದವು. ಅದರ ನಾಲ್ಕು ಮೂಲೆಗಳಿಗೂ ಹೂಗಳ ತೋರಣಗಳ ಜೋಡಣೆಗಳಿದ್ದವು.
31ಅಂಚಿಗೆ ಒಳಗಾದ ಅದರ ಬಾಯಿ ಮೇಲೆ ಒಂದು ಮೊಳ ಉದ್ದವಾಗಿತ್ತು. ಚಕ್ರಾಕಾರವಾಗಿದ್ದ ಈ ಬಾಯಿ ಒಂದೂವರೆ ಮೊಳ ಅಗಲವಾಗಿತ್ತು. ಅದರ ಬಾಯಿಯ ಮೇಲೆ ಚಿತ್ರಗಳಿದ್ದವು. ಅದರ ಚಿತ್ರಗಳು ದುಂಡಾಗಿರದೆ ಚೌಕವಾಗಿದ್ದವು.
32ಅಂಚುಗಳ ಕೆಳಗೆ ನಾಲ್ಕು ಗಾಲಿಗಳಿದ್ದವು. ಗಾಲಿಗಳ ಅಚ್ಚುಗಳು ಪೀಠದಲ್ಲಿದ್ದವು. ಒಂದೊಂದು ಗಾಲಿಯು ಒಂದೂವರೆ ಮೊಳವಾಗಿತ್ತು. ಗಾಲಿಗಳ ಮೇಲೆ ಇದ್ದ ಕೆಲಸವು ರಥದ ಗಾಲಿಯ ಕೆಲಸದ ಹಾಗೆ ಇತ್ತು.
33ಅವುಗಳ ಇರುಸುಗಳೂ, ಅಣಸುಗಳೂ, ಚಕ್ರಗಳೂ, ಅವುಗಳ ಕಂಬಿಗಳೂ ಎರಕ ಹೊಯ್ದ ಕಂಚಿನಿಂದ ಮಾಡಲಾಗಿತ್ತು.
34ಒಂದೊಂದು ಪೀಠದ ನಾಲ್ಕು ಮೂಲೆಗಳಲ್ಲಿ ಅಂಚುಗಳಿದ್ದವು. ಪೀಠದಲ್ಲಿಂದಲೇ ಅಖಂಡವಾಗಿದ್ದವು.
35ಪೀಠದ ತಲೆಯಲ್ಲಿ 23 ಸೆಂಟಿಮೀಟರ್ ದುಂಡಾದ ಬಾಯಿ ಇತ್ತು. ಪೀಠದ ತಲೆಯ ಮೇಲೆ ಅದರ ಕೈಪಿಡಿಗಳೂ, ಅದರ ಅಂಚುಗಳೂ ಅಖಂಡವಾಗಿದ್ದವು.
36ಅದರದರ ಪ್ರಮಾಣದ ಪ್ರಕಾರ ಹಲಗೆಗಳ ಕೈಹಿಡಿಗಳ ಮೇಲೆಯೂ ಅಂಚುಗಳ ಮೇಲೆಯೂ ಕೆರೂಬಿ, ಸಿಂಹ ಖರ್ಜೂರ ವೃಕ್ಷಗಳನ್ನು ಚಿತ್ರಿಸಿದನು. ಸುತ್ತಲೂ ಅದರದರ ಪ್ರಮಾಣದ ಪ್ರಕಾರ ಪುಷ್ಪ ತೋರಣಗಳನ್ನು ಚಿತ್ರಿಸಿದನು.
37ಈ ಪ್ರಕಾರ ಆ ಹತ್ತು ಪೀಠಗಳನ್ನು ಮಾಡಿದನು. ಅವುಗಳಿಗೆಲ್ಲಾ ಒಂದೇ ಎರಕವೂ, ಒಂದೇ ಅಳತೆಯೂ, ಒಂದೇ ಪ್ರಮಾಣವೂ ಇದ್ದವು.
38ಹತ್ತು ಕಂಚಿನ ತೊಟ್ಟಿಗಳನ್ನು ಮಾಡಿದನು. ಒಂದೊಂದು ತೊಟ್ಟಿಯು 800 ಲೀಟರ್ ನೀರು ಹಿಡಿಯುತ್ತಿತ್ತು. ಒಂದೊಂದು ತೊಟ್ಟಿಯು 2 ಮೀಟರ್ ಇದ್ದವು. ಪ್ರತಿಯೊಂದು ಪೀಠಗಳ ಮೇಲೆ ಒಂದೊಂದು ತೊಟ್ಟಿಯನ್ನು ಇಟ್ಟನು.
39ಆಲಯದ ದಕ್ಷಿಣ ದಿಕ್ಕಿಗೆ ಐದು ಪೀಠಗಳನ್ನೂ, ಆಲಯದ ಉತ್ತರ ದಿಕ್ಕಿಗೆ ಐದು ಪೀಠಗಳನ್ನೂ ಇಟ್ಟನು. ಆದರೆ ಜಲಾಶಯವನ್ನು ಆಲಯದ ದಕ್ಷಿಣ ದಿಕ್ಕಿಗೆ ಅಂದರೆ ಆಲಯದ ಆಗ್ನೇಯ ಮೂಲೆಯಲ್ಲಿ ಇಟ್ಟನು.
40ಇದಲ್ಲದೆ ಹೂರಾಮನು ಪಾತ್ರೆಗಳನ್ನೂ, ಸಲಿಕೆಗಳನ್ನೂ, ಬಟ್ಟಲುಗಳನ್ನೂ ಮಾಡಿದನು. ಯೆಹೋವ ದೇವರ ಆಲಯಕ್ಕೋಸ್ಕರ ಅರಸನಾದ ಸೊಲೊಮೋನನು ಒಪ್ಪಿಸಿದ ಎಲ್ಲಾ ಕೆಲಸಗಳನ್ನು ಹೂರಾಮನು ಮಾಡಿ ತೀರಿಸಿದನು:
41ಅವು ಯಾವುವೆಂದರೆ, ಎರಡು ಸ್ತಂಭಗಳು, ಆ ಸ್ತಂಭಗಳ ಮೇಲಿನ ಎರಡು ಕುಂಭಗಳು, ಆ ಎರಡು ಕುಂಭಗಳನ್ನು ಮುಚ್ಚುವ ಎರಡು ಜಾಲರಿಗಳು.
42ಎರಡು ಜಾಲರಿ ಸಾಮಾನುಗಳಿಗೆ ನಾನೂರು ದಾಳಿಂಬೆ ಹಣ್ಣುಗಳು, ಸ್ತಂಭಗಳ ಮೇಲೆ ಇರುವ ಎರಡು ಕುಂಭಗಳನ್ನು ಮುಚ್ಚುವಂತೆ ಒಂದು ಜಾಲರಿ ಸಲಕರಣೆಗಳಿಗೆ ಎರಡು ಸಾಲಿನ ದಾಳಿಂಬೆ ಹಣ್ಣುಗಳು,
43ಹತ್ತು ಪೀಠಗಳು, ಅವುಗಳ ಮೇಲಿರುವ ಹತ್ತು ತೊಟ್ಟಿಗಳು,
44ಸಮುದ್ರಪಾತ್ರೆಯು ಅದರ ಕೆಳಗಿರುವ ಹನ್ನೆರಡು ಎತ್ತುಗಳು,
45ಪಾತ್ರೆಗಳು, ಸಲಿಕೆಗಳು, ಬೋಗುಣಿಗಳು. ಯೆಹೋವ ದೇವರ ಆಲಯಕ್ಕೋಸ್ಕರ ಅರಸನಾದ ಸೊಲೊಮೋನನಿಗೆ ಹೂರಾಮನು ಮಾಡಿದ ಈ ಸಲಕರಣೆಗಳೆಲ್ಲಾ ಹೊಳೆಯುವ ಕಂಚಿನವುಗಳಾಗಿದ್ದವು.
46ಯೊರ್ದನಿಗೆ ಸೇರಿದ ಬಯಲಾದ ಸುಕ್ಕೋತಿಗೂ, ಚಾರೆತಾನಿಗೂ ನಡುವೆ ಇರುವ ಜೇಡಿಮಣ್ಣಿನ ಅಚ್ಚುಗಳಲ್ಲಿ ಅರಸನು ಅವುಗಳನ್ನು ಎರಕ ಹೊಯ್ಯಿಸಿದನು.
47ಸೊಲೊಮೋನನು ಮಾಡಿಸಿದ ಈ ಸಲಕರಣೆಗಳೆಲ್ಲಾ ಬಹು ಹೆಚ್ಚಾಗಿದ್ದರಿಂದ ಅವುಗಳನ್ನು ಎಣಿಸದೆ ಬಿಟ್ಟನು, ಹೀಗಾಗಿ ಕಂಚಿನ ತೂಕವು ಎಷ್ಟೆಂದು ನಿರ್ಧರಿಸಲಾಗಲಿಲ್ಲ.
48ಸೊಲೊಮೋನನು ಯೆಹೋವ ದೇವರ ಆಲಯದ ಎಲ್ಲಾ ಸಲಕರಣೆಗಳನ್ನು ಮಾಡಿಸಿದನು. ಅವು ಯಾವುವೆಂದರೆ: ಬಂಗಾರದ ಧೂಪವೇದಿಯನ್ನು ಸಮ್ಮುಖದ ರೊಟ್ಟಿಗಳನ್ನು ಇಡುವುದಕ್ಕೆ ಚಿನ್ನದ ಮೇಜೂ,
49ಮಹಾಪರಿಶುದ್ಧ ಸ್ಥಳದ ಮುಂಭಾಗದ ಬಲಗಡೆಯಲ್ಲಿ ಐದು, ಎಡಗಡೆಯಲ್ಲಿ ಐದು ಶುದ್ಧ ಬಂಗಾರದ ದೀಪಸ್ತಂಭಗಳೂ, ಅದರ ಬಂಗಾರದ ಹೂವುಗಳೂ, ದೀಪಗಳೂ, ಚಿಮಟಗಳೂ,
50ಶುದ್ಧ ಬಂಗಾರದಿಂದ ಕತ್ತರಿಗಳು, ಬೋಗುಣಿಗಳು, ಅಗ್ನಿಪಾತ್ರೆಗಳು, ಅಗ್ಗಿಷ್ಟಿಗೆ ಇವುಗಳನ್ನು ಮಾಡಿಸಿದನು. ಇದಲ್ಲದೆ ಮಹಾಪರಿಶುದ್ಧ ಸ್ಥಳವಾದ ಗರ್ಭಗುಡಿಯ ಬಾಗಿಲುಗಳಿಗೂ, ಮಂದಿರದ ಮನೆಯ ಬಾಗಿಲುಗಳಿಗೂ ಬಂಗಾರದ ಕೀಲುಗಳನ್ನು ಮಾಡಿಸಿದನು.
51ಹೀಗೆಯೇ ಅರಸನಾದ ಸೊಲೊಮೋನನು ಯೆಹೋವ ದೇವರ ಆಲಯಕ್ಕೋಸ್ಕರ ಮಾಡಿಸಿದ ಕೆಲಸವೆಲ್ಲಾ ಮುಗಿಯಿತು. ಆಗ ಸೊಲೊಮೋನನು ತನ್ನ ತಂದೆ ದಾವೀದನು ಪ್ರತಿಷ್ಠೆ ಮಾಡಿದ ಬೆಳ್ಳಿಯನ್ನೂ, ಬಂಗಾರವನ್ನೂ, ಎಲ್ಲಾ ಸಲಕರಣೆಗಳನ್ನೂ ಯೆಹೋವ ದೇವರ ಆಲಯದ ಬೊಕ್ಕಸಗಳಲ್ಲಿ ಇಟ್ಟನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.