Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೋಹಾನನು 2

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ನನ್ನ ಪ್ರಿಯ ಮಕ್ಕಳೇ, ನೀವು ಪಾಪಮಾಡದಂತೆ ಇವುಗಳನ್ನು ನಾನು ನಿಮಗೆ ಬರೆಯುತ್ತೇನೆ. ಯಾವನಾದರೂ ಪಾಪಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತರಾದ ಕ್ರಿಸ್ತ ಯೇಸುವು ನಮ್ಮ ಪರವಾಗಿ ವಾದಿಸುವ ವಕೀಲರಾಗಿದ್ದಾರೆ.
2ಕ್ರಿಸ್ತ ಯೇಸು ನಮ್ಮ ಪಾಪಗಳನ್ನು ಪರಿಹರಿಸುವ ಬಲಿಯಾಗಿದ್ದಾರೆ. ನಮ್ಮ ಪಾಪಗಳಿಗೆ ಮಾತ್ರವಲ್ಲದೆ ಸಮಸ್ತ ಲೋಕದ ಪಾಪಗಳನ್ನೂ ಪರಿಹರಿಸುತ್ತಾರೆ. ವಿಶ್ವಾಸಿಗಳಲ್ಲಿ ಪ್ರೀತಿ ಮತ್ತು ದ್ವೇಷ
3ನಾವು ದೇವರ ಆಜ್ಞೆಗಳನ್ನು ಕೈಕೊಂಡು ನಡೆಯುವುದರಿಂದಲೇ ದೇವರನ್ನು ಬಲ್ಲವರಾಗಿದ್ದೇವೆಂದು ತಿಳಿದುಕೊಳ್ಳುತ್ತೇವೆ.
4ಒಬ್ಬನು, “ನಾನು ಅವರನ್ನು ಬಲ್ಲೆನು,” ಎಂದು ಹೇಳಿ ಅವರ ಆಜ್ಞೆಗಳನ್ನು ಕೈಗೊಳ್ಳದಿದ್ದರೆ ಅವನು ಸುಳ್ಳುಗಾರನಾಗಿದ್ದಾನೆ. ಸತ್ಯವು ಅವನಲ್ಲಿ ಇಲ್ಲ.
5ಯಾವನಾದರೂ ದೇವರ ವಾಕ್ಯವನ್ನು ಕೈಕೊಂಡು ನಡೆದರೆ ಅವನಲ್ಲಿ ನಿಜವಾಗಿ ದೇವರ ಪ್ರೀತಿಯು ಪರಿಪೂರ್ಣವಾಗಿದೆ. ಇದರಿಂದಲೇ ನಾವು ದೇವರಲ್ಲಿದ್ದೇವೆಂಬುದನ್ನು ತಿಳಿದುಕೊಳ್ಳುತ್ತೇವೆ.
6ದೇವರಲ್ಲಿ ನೆಲೆಗೊಂಡವನಾಗಿದ್ದೇನೆಂದು ಹೇಳುವವನು ಯೇಸು ಜೀವಿಸಿದಂತೆಯೇ ತಾನೂ ಜೀವಿಸಬೇಕು.
7ಪ್ರಿಯರೇ, ನಾನು ನಿಮಗೆ ಬರೆಯುವುದು ಹೊಸ ಅಪ್ಪಣೆಯಲ್ಲ, ಮೊದಲಿನಿಂದಲೂ ನಿಮಗಿದ್ದ ಹಳೆಯ ಅಪ್ಪಣೆಯಾಗಿದೆ. ಈ ಹಳೆಯ ಅಪ್ಪಣೆಯು ಮೊದಲಿನಿಂದಲೂ ನೀವು ಕೇಳಿದ ವಾಕ್ಯವೇ.
8ತಿರುಗಿ ನಾನು ನಿಮಗೆ ಬರೆಯುವುದು ಹೊಸ ಅಪ್ಪಣೆಯೇ. ಇದು ಕ್ರಿಸ್ತ ಯೇಸುವಿನಲ್ಲಿಯೂ ನಿಮ್ಮಲ್ಲಿಯೂ ಸತ್ಯವಾಗಿದೆ. ಏಕೆಂದರೆ ಕತ್ತಲೆಯು ಕಳೆದುಹೋಗುತ್ತದೆ. ಸತ್ಯವಾದ ಬೆಳಕು ಈಗ ಪ್ರಕಾಶಿಸುತ್ತಲಿದೆ.
9ಬೆಳಕಿನಲ್ಲಿದ್ದೇನೆಂದು ಹೇಳಿಕೊಂಡು ತನ್ನ ಸಹೋದರನನ್ನು ದ್ವೇಷಿಸುವವನು ಈವರೆಗೂ ಕತ್ತಲೆಯಲ್ಲಿದ್ದಾನೆ.
10ತನ್ನ ಸಹೋದರನನ್ನು ಪ್ರೀತಿಸುವವನು ಬೆಳಕಿನಲ್ಲಿ ನೆಲೆಗೊಂಡಿದ್ದಾನೆ ಮತ್ತು ಅವನಲ್ಲಿ ಆತಂಕವುಳ್ಳದ್ದು ಯಾವುದೂ ಇಲ್ಲ.
11ಆದರೆ ತನ್ನ ಸಹೋದರನನ್ನು ದ್ವೇಷಿಸುವವನು ಕತ್ತಲೆಯಲ್ಲಿದ್ದಾನೆ ಮತ್ತು ಕತ್ತಲೆಯಲ್ಲಿ ಜೀವಿಸುತ್ತಾನೆ. ಕತ್ತಲೆಯು ಅವನ ಕಣ್ಣುಗಳನ್ನು ಕುರುಡು ಮಾಡಿದ್ದರಿಂದ ತಾನು ಎಲ್ಲಿಗೆ ಹೋಗುತ್ತಾನೋ ಎಂದು ಅವನಿಗೆ ತಿಳಿಯದು. ಬರೆಯಲು ಕಾರಣಗಳು
12ಪ್ರಿಯ ಮಕ್ಕಳೇ, ಕ್ರಿಸ್ತ ಯೇಸುವಿನ ಹೆಸರಿನ ನಿಮಿತ್ತ ನಿಮ್ಮ ಪಾಪಗಳು ಕ್ಷಮಿಸಲಾಗಿರುವುದರಿಂದ ನಾನು ನಿಮಗೆ ಬರೆಯುತ್ತೇನೆ.
13ತಂದೆಗಳೇ, ಆದಿಯಿಂದ ಇರುವ ದೇವರನ್ನು ನೀವು ಬಲ್ಲವರಾಗಿರುವುದರಿಂದ ನಾನು ನಿಮಗೆ ಬರೆಯುತ್ತೇನೆ. ಯೌವನಸ್ಥರೇ, ನೀವು ಕೆಡುಕನನ್ನು ಜಯಿಸಿರುವುದರಿಂದ ನಿಮಗೆ ಬರೆಯುತ್ತೇನೆ.
14ಮಕ್ಕಳೇ, ನೀವು ತಂದೆಯನ್ನು ತಿಳಿದುಕೊಂಡಿರುವುದರಿಂದ ನಿಮಗೆ ಬರೆಯುತ್ತೇನೆ. ತಂದೆಗಳೇ, ಆದಿಯಿಂದ ಇರುವ ದೇವರನ್ನು ನೀವು ಬಲ್ಲವರಾಗಿರುವುದರಿಂದ ನಿಮಗೆ ಬರೆದಿದ್ದೇನೆ. ಯೌವನಸ್ಥರೇ, ನೀವು ಬಲ ಹೊಂದಿರುವುದರಿಂದಲೂ ದೇವರ ವಾಕ್ಯವು ನಿಮ್ಮಲ್ಲಿ ನೆಲೆಗೊಂಡಿರುವುದರಿಂದಲೂ ನೀವು ಕೆಡುಕನನ್ನು ಜಯಿಸಿರುವುದರಿಂದಲೂ ನಿಮಗೆ ಬರೆದಿದ್ದೇನೆ. ಲೋಕವನ್ನು ಪ್ರೀತಿಸಬೇಡಿರಿ
15ಲೋಕವನ್ನಾಗಲಿ, ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಪ್ರೀತಿಯು ಅವನಲ್ಲಿಲ್ಲ.
16ಏಕೆಂದರೆ ಲೋಕದಲ್ಲಿರುವ ಶರೀರದಾಶೆ, ಕಣ್ಣಿನಾಶೆ, ಜೀವನದ ಗರ್ವ ಇವು ತಂದೆಯಿಂದ ಬಂದವುಗಳಲ್ಲ, ಲೋಕದಿಂದ ಬಂದವುಗಳಾಗಿವೆ.
17ಲೋಕವೂ ಲೋಕದ ಆಶೆಗಳೂ ಗತಿಸಿಹೋಗುತ್ತವೆ. ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಜೀವಿಸುವನು. ಕ್ರಿಸ್ತವಿರೋಧಿಗಳು ಮತ್ತು ದುರ್ಬೋಧಕರು
18ಪ್ರಿಯ ಮಕ್ಕಳೇ, ಇದು ಅಂತ್ಯ ಕಾಲವಾಗಿದೆ. ಕ್ರಿಸ್ತವಿರೋಧಿಯು ಬರುತ್ತಾನೆಂದು ನೀವು ಕೇಳಿದ್ದೀರಿ. ಈಗಾಗಲೇ ಅನೇಕ ಕ್ರಿಸ್ತವಿರೋಧಿಗಳಿದ್ದಾರೆ. ಇದರಿಂದ ಇದು ಕಡೇ ಗಳಿಗೆಯಾಗಿದೆ ಎಂದು ನಾವು ತಿಳಿದುಕೊಳ್ಳುತ್ತೇವೆ.
19ಅವರು ನಮ್ಮಿಂದ ಹೊರಟು ಹೋದರು. ಆದರೆ ಅವರು ನಮ್ಮವರಾಗಿರಲಿಲ್ಲ. ಏಕೆಂದರೆ ಅವರು ನಮ್ಮವರಾಗಿದ್ದರೆ, ನಮ್ಮ ಜೊತೆಯಲ್ಲೇ ಇರುತ್ತಿದ್ದರು. ಆದರೆ ಅವರು ನಮ್ಮಿಂದ ಹೊರಟು ಹೋದುದರಿಂದ ಅವರೆಲ್ಲರೂ ನಮ್ಮವರಲ್ಲವೆಂಬುದು ತೋರಿಬಂತು.
20ಆದರೆ ನೀವು ಪವಿತ್ರವಾದವರಿಂದ ಅಭಿಷೇಕವನ್ನು ಹೊಂದಿದವರಾಗಿದ್ದು ನೀವೆಲ್ಲರೂ ಸತ್ಯವನ್ನು ತಿಳಿದವರಾಗಿದ್ದೀರಿ.
21ನೀವು ಸತ್ಯವನ್ನು ತಿಳಿಯದವರೆಂದು ನಾನು ಭಾವಿಸುತ್ತಿಲ್ಲ, ನೀವು ಸತ್ಯವನ್ನು ತಿಳಿದಿರುವುದರಿಂದಲೂ ಯಾವ ಸುಳ್ಳೂ ಸತ್ಯದಿಂದ ಬರುವುದಿಲ್ಲ ಎಂಬುವುದನ್ನು ನೀವು ತಿಳಿದವರಾಗಿರುವುದರಿಂದಲೂ ನಾನು ನಿಮಗೆ ಬರೆದೆನು.
22ಸುಳ್ಳುಗಾರನು ಯಾರು? ಮನುಷ್ಯನಾಗಿ ಬಂದ ಯೇಸುವು ಕ್ರಿಸ್ತ ಅಲ್ಲ ಎಂದು ಯಾವನು ಅಲ್ಲಗಳೆಯುತ್ತಾನೋ ಅವನೇ ಸುಳ್ಳುಗಾರನು. ಅವನೇ ತಂದೆಯನ್ನೂ ಮಗನನ್ನೂ ಅಲ್ಲಗಳೆಯುವ ಕ್ರಿಸ್ತವಿರೋಧಿಯಾಗಿದ್ದಾನೆ.
23ಮಗನನ್ನು ಅಲ್ಲಗಳೆಯುವವನು ತಂದೆಯನ್ನೂ ಅಲ್ಲಗಳೆಯುತ್ತಾನೆ. ಮಗನನ್ನು ಅಂಗೀಕರಿಸುವವನು ತಂದೆಯನ್ನೂ ಅಂಗೀಕರಿಸುತ್ತಾನೆ.
24ನೀವಂತೂ ಯಾವುದನ್ನು ಮೊದಲಿನಿಂದ ಕೇಳಿದ್ದೀರೋ ಅದು ನಿಮ್ಮಲ್ಲಿ ನೆಲೆಗೊಂಡಿರಲಿ. ಹಾಗಿದ್ದರೆ, ನೀವು ಸಹ ಮಗನಲ್ಲಿಯೂ ತಂದೆಯಲ್ಲಿಯೂ ನೆಲೆಗೊಂಡಿರುತ್ತೀರಿ.
25ಇದೇ ಕ್ರಿಸ್ತ ಯೇಸು ನಮಗೆ ವಾಗ್ದಾನ ಮಾಡಿರುವ ನಿತ್ಯಜೀವವಾಗಿರುತ್ತದೆ.
26ನಿಮ್ಮನ್ನು ವಂಚಿಸುವವರ ವಿಷಯವಾಗಿ ಇವುಗಳನ್ನು ನಾನು ನಿಮಗೆ ಬರೆದಿದ್ದೇನೆ.
27ಆದರೆ ಕ್ರಿಸ್ತ ಯೇಸುವಿನಿಂದ ನೀವು ಹೊಂದಿದ ಅಭಿಷೇಕವು ನಿಮ್ಮಲ್ಲಿ ನೆಲೆಗೊಂಡಿರುತ್ತದೆ. ಆದುದರಿಂದ ಬೇರೆ ಯಾರೂ ನಿಮಗೆ ಬೋಧಿಸುವ ಅವಶ್ಯವಿಲ್ಲ. ಆ ಅಭಿಷೇಕವೇ ಎಲ್ಲಾ ವಿಷಯಗಳಲ್ಲಿ ನಿಮಗೆ ಬೋಧಿಸುವುದು. ಆ ಬೋಧನೆಯು ಸುಳ್ಳಲ್ಲ, ಸತ್ಯವಾದದ್ದು. ಆದ್ದರಿಂದ ಅದು ನಿಮಗೆ ಬೋಧಿಸಿದ ಪ್ರಕಾರವೇ, ಕ್ರಿಸ್ತ ಯೇಸುವಿನಲ್ಲಿ ನೀವು ನೆಲೆಗೊಳ್ಳಿರಿ. ದೇವರ ಮಕ್ಕಳು ಮತ್ತು ಪಾಪ
28ಪ್ರಿಯ ಮಕ್ಕಳೇ, ಕ್ರಿಸ್ತ ಯೇಸು ಪ್ರತ್ಯಕ್ಷವಾಗುವಾಗ ನೀವು ಅವರ ಆಗಮನದಲ್ಲಿ ಅವರ ಮುಂದೆ ನಿಲ್ಲಲು ನಾಚಿಕೆಪಡದೆ ಧೈರ್ಯದಿಂದಿರುವಂತೆ ಅವರಲ್ಲಿ ನೆಲೆಗೊಳ್ಳಿರಿ.
29ದೇವರು ನೀತಿವಂತರಾಗಿದ್ದಾರೆಂಬುದು ನಿಮಗೆ ಗೊತ್ತಾಗಿದ್ದರೆ, ನೀತಿಯನ್ನು ಅನುಸರಿಸುವ ಪ್ರತಿಯೊಬ್ಬನೂ ಅವರಿಂದ ಹುಟ್ಟಿದವನೆಂದು ನೀವು ತಿಳಿದಿರಬೇಕು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.