Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಕೊರಿಂಥದವರಿಗೆ 10

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಪ್ರಿಯರೇ, ನಮ್ಮ ಪಿತೃಗಳೆಲ್ಲರೂ ಮೇಘದ ನೆರಳಿನಲ್ಲಿದ್ದರು, ಅವರೆಲ್ಲರೂ ಸಮುದ್ರವನ್ನು ಹಾದುಹೋದರು ಎಂಬ ವಿಷಯದಲ್ಲಿ ನೀವು ಅಜ್ಞಾನಿಗಳಾಗಿರಬಾರದೆಂದು ಅಪೇಕ್ಷಿಸುತ್ತೇನೆ.
2ಅವರೆಲ್ಲರೂ ಮೋಶೆಯಲ್ಲಿ ಮೇಘದಲ್ಲಿಯೂ ಸಮುದ್ರದಲ್ಲಿಯೂ ಸ್ನಾನವನ್ನು ಹೊಂದಿದರು.
3ಅವರೆಲ್ಲರೂ ಒಂದೇ ಆತ್ಮಿಕವಾದ ಆಹಾರವನ್ನು ಉಂಡರು.
4ಅವರೆಲ್ಲರೂ ಒಂದೇ ಆತ್ಮಿಕವಾದ ಪಾನವನ್ನು ಕುಡಿದರು. ಅವರು ತಮ್ಮೊಂದಿಗೆ ಬಂದ ದೈವಿಕವಾದ ಬಂಡೆಯೊಳಗಿಂದ ಬಂದ ನೀರನ್ನು ಕುಡಿದರು. ಕ್ರಿಸ್ತ ಯೇಸುವೇ ಆ ಬಂಡೆ.
5ಆದರೆ ಅವರೊಳಗೆ ಬಹುಮಂದಿಯನ್ನು ದೇವರು ಮೆಚ್ಚಲಿಲ್ಲ. ಆದ್ದರಿಂದ ಅವರು ಅರಣ್ಯದಲ್ಲಿ ಸಂಹಾರವಾದರು.
6ಅವರು ಕೆಟ್ಟ ವಿಷಯಗಳನ್ನು ಆಶಿಸಿದಂತೆ ನಾವೂ ಆಶಿಸುವವರಾಗಬಾರದೆಂಬುದಕ್ಕಾಗಿ ಈ ಸಂಗತಿಗಳು ಈಗ ನಮಗೆ ನಿದರ್ಶನಗಳಾಗಿವೆ.
7“ಅವರಲ್ಲಿ ಕೆಲವರು ವಿಗ್ರಹಾರಾಧಕರಾಗಿ ಉಣ್ಣುವುದಕ್ಕೂ, ಕುಡಿಯುವುದಕ್ಕೂ ಕುಳಿತುಕೊಂಡರು, ಕುಣಿದಾಡುವುದಕ್ಕೆ ಎದ್ದರು,” ಎಂದು ಬರೆದಿರುವಂತೆ ನೀವೂ ವಿಗ್ರಹಾರಾಧಕರಾಗಬೇಡಿರಿ.
8ಅವರಲ್ಲಿ ಕೆಲವರು ಜಾರತ್ವ ಮಾಡಿ, ಒಂದೇ ದಿನದಲ್ಲಿ ಇಪ್ಪತ್ಮೂರು ಸಾವಿರ ಮಂದಿ ಸತ್ತರು. ನಾವು ಜಾರತ್ವ ಮಾಡದೆ ಇರೋಣ.
9ಅವರಲ್ಲಿ ಕೆಲವರು ಕರ್ತದೇವರನ್ನು ಪರೀಕ್ಷಿಸಿ ಸರ್ಪಗಳಿಂದ ನಾಶವಾದಂತೆ, ನಾವೂ ಪರೀಕ್ಷಿಸದೆ ಇರೋಣ.
10ಅವರಲ್ಲಿ ಕೆಲವರು ಗೊಣಗುಟ್ಟಿ ಸಂಹಾರಕನ ಕೈಯಿಂದ ಸಂಹಾರವಾದಂತೆ ನೀವೂ ಗೊಣಗುಟ್ಟಬೇಡಿರಿ.
11ಆ ಮನುಷ್ಯರಿಗೆ ಸಂಭವಿಸಿದ ಈ ಸಂಗತಿಗಳು ನಿದರ್ಶನಗಳಾಗಿವೆ, ಯುಗಾಂತ್ಯಕ್ಕೆ ಬಂದಿರುವ ನಮಗೆ ಎಚ್ಚರಿಕೆಯ ಮಾತುಗಳಾಗಿವೆ.
12ಆದಕಾರಣ ದೃಢವಾಗಿ ನಿಂತಿದ್ದೇವೆಂದು ಭಾವಿಸುವ ನೀವು ಬೀಳದಿರುವಂತೆ ನೋಡಿಕೊಳ್ಳಿರಿ.
13ಮನುಷ್ಯರಿಗಾಗುವ ಶೋಧನೆಯೇ ಹೊರತು, ಬೇರೆ ಯಾವುದೂ ನಿಮಗೆ ಸಂಭವಿಸಲಿಲ್ಲ. ಆದರೆ ದೇವರು ನಂಬಿಗಸ್ತರು. ನಿಮ್ಮ ಶಕ್ತಿಗೆ ಮೀರಿದ ಶೋಧನೆಗಳನ್ನು ಅವರು ನಿಮ್ಮ ಮೇಲೆ ಬರುವಂತೆ ಮಾಡುವುದಿಲ್ಲ. ಆದರೆ ನಿಮಗೆ ಶೋಧನೆಗಳು ಬಂದಾಗ, ಅವುಗಳನ್ನು ಜಯಿಸುವುದಕ್ಕೆ ಶಕ್ತರಾಗುವಂತೆ, ಅವುಗಳಿಂದ ತಪ್ಪಿಸಿಕೊಳ್ಳುವ ಮಾರ್ಗವನ್ನು ಮಾಡುವರು. ಪ್ರಭುವಿನ ಭೋಜನ
14ಆದ್ದರಿಂದ ನನ್ನ ಪ್ರಿಯ ಸ್ನೇಹಿತರೇ, ವಿಗ್ರಹಾರಾಧನೆಯನ್ನು ಬಿಟ್ಟು ಓಡಿಹೋಗಿರಿ.
15ವಿವೇಕಿಗಳಿಗೆ ಹೇಳಿದಂತೆ, ನಾನು ಹೇಳುವುದನ್ನು ನೀವು ವಿವೇಚಿಸಿರಿ.
16ನಾವು ಸ್ತೋತ್ರಮಾಡಿ ಕುಡಿಯುವ ಸ್ತೋತ್ರದ ಪಾತ್ರೆಯು ಕ್ರಿಸ್ತ ಯೇಸುವಿನ ರಕ್ತದ ಅನ್ಯೋನ್ಯತೆಯಲ್ಲವೇ? ನಾವು ಮುರಿಯುವ ರೊಟ್ಟಿಯು ಕ್ರಿಸ್ತನ ದೇಹದಲ್ಲಿಯ ಅನ್ಯೋನ್ಯತೆಯಲ್ಲವೇ?
17ರೊಟ್ಟಿ ಒಂದೇ, ಆದ್ದರಿಂದ ನಾವು ಅನೇಕರಿದ್ದರೂ, ಒಂದೇ ದೇಹವಾಗುತ್ತೇವೆ. ಏಕೆಂದರೆ ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಭಾಗಿಗಳಾಗುತ್ತೇವೆ.
18ನೀವು ಇಸ್ರಾಯೇಲ್ ಜನರ ಕುರಿತು ಆಲೋಚಿಸಿರಿ: ಯಜ್ಞಾರ್ಪಿತವಾದದ್ದನ್ನು ತಿನ್ನುವವರು ಬಲಿಪೀಠದೊಡನೆ ಭಾಗಿಗಳಾಗಿದ್ದಾರಲ್ಲವೇ?
19ಹಾಗಾದರೆ ನಾನು ಹೇಳುವುದೇನು? ವಿಗ್ರಹಕ್ಕೆ ಅರ್ಪಿಸಿದ್ದು ಅಥವಾ ವಿಗ್ರಹಕ್ಕೆ ಏನಾದರೂ ಮಹತ್ವವಿರುತ್ತದೆಯೋ? ನಿಶ್ಚಯವಾಗಿಯೂ ಇಲ್ಲ.
20ಆದರೆ ಯೆಹೂದ್ಯರಲ್ಲದವರು ಅರ್ಪಿಸುವ ಯಜ್ಞ ದೇವರಿಗಲ್ಲ, ದೆವ್ವಗಳಿಗೆ ಅರ್ಪಿಸುವಂತದ್ದಾಗಿದೆ. ನೀವು ದೆವ್ವಗಳೊಂದಿಗೆ ಭಾಗಿಗಳಾಗಿರಬೇಕೆಂಬುದು ನನ್ನ ಇಷ್ಟವಲ್ಲ.
21ನೀವು ಕರ್ತದೇವರ ಪಾತ್ರೆಯಲ್ಲಿಯೂ ದೆವ್ವಗಳ ಪಾತ್ರೆಯಲ್ಲಿಯೂ ಕುಡಿಯಲಾರಿರಿ. ನೀವು ಕರ್ತದೇವರ ಪಂಕ್ತಿಯಲ್ಲಿಯೂ ದೆವ್ವಗಳ ಪಂಕ್ತಿಯಲ್ಲಿಯೂ ಭಾಗಿಗಳಾಗಿರಲಾರಿರಿ.
22ನಾವು ಹೀಗೆ ದೇವರನ್ನು ಅಸೂಯೆಗೆಬ್ಬಿಸಬಹುದೇ? ನಾವು ದೇವರಿಗಿಂತಲೂ ಬಲಿಷ್ಠರಾಗಿದ್ದೇವೆಯೋ? ವಿಶ್ವಾಸಿಗಳ ಸ್ವಾತಂತ್ರ್ಯ
23ಎಲ್ಲಾ ಕಾರ್ಯಗಳನ್ನು ಮಾಡಲು ಸ್ವಾತಂತ್ರ್ಯವಿದೆ. ಆದರೆ ಎಲ್ಲಾ ಕಾರ್ಯಗಳೂ ಪ್ರಯೋಜನಕರವಾಗಿರುವುದಿಲ್ಲ. ಎಲ್ಲಾ ಕಾರ್ಯಗಳನ್ನು ಮಾಡಲು ಸ್ವಾತಂತ್ರ್ಯವಿದೆ ಆದರೆ, ಎಲ್ಲಾ ಕಾರ್ಯಗಳೂ ಭಕ್ತಿವೃದ್ಧಿಯನ್ನುಂಟುಮಾಡುವುದಿಲ್ಲ.
24ಪ್ರತಿಯೊಬ್ಬನೂ ತನ್ನ ಹಿತವನ್ನು ಮಾತ್ರ ನೋಡಿಕೊಳ್ಳದೆ, ಪರಹಿತವನ್ನೂ ನೋಡಲಿ.
25ಮಾಂಸದ ಅಂಗಡಿಯಲ್ಲಿ ಮಾರುವುದು ಏನಿದ್ದರೂ ಮನಸ್ಸಾಕ್ಷಿಯನ್ನು ಪ್ರಶ್ನಿಸದೇ ತಿನ್ನಿರಿ.
26ಏಕೆಂದರೆ, “ಭೂಮಿಯೂ ಅದರಲ್ಲಿರುವ ಸಮಸ್ತವೂ ಕರ್ತ ದೇವರದಾಗಿದೆ.”
27ಅವಿಶ್ವಾಸಿಗಳಲ್ಲಿ ಯಾವನಾದರೂ ನಿಮ್ಮನ್ನು ಊಟಕ್ಕೆ ಕರೆದಾಗ ನೀವು ಹೋಗಬಯಸಿದರೆ, ನಿಮ್ಮ ಮುಂದೆ ಬಡಿಸಿದ ಪ್ರತಿಯೊಂದನ್ನು ಮನಸ್ಸಾಕ್ಷಿ ನಿಮಿತ್ತ ಏನನ್ನೂ ಪ್ರಶ್ನಿಸದೆ ತಿನ್ನಿರಿ.
28ಆದರೆ ಯಾರಾದರೂ ನಿಮಗೆ, “ಇದು ನೈವೇದ್ಯ ಮಾಡಿದ್ದು,” ಎಂದು ಹೇಳಿದರೆ, ತಿಳಿಸಿದ ವ್ಯಕ್ತಿಯ ನಿಮಿತ್ತವೂ ಆ ವ್ಯಕ್ತಿಯ ಮನಸ್ಸಾಕ್ಷಿಯ ನಿಮಿತ್ತವೂ ತಿನ್ನಬೇಡಿರಿ.
29ನಾನು ನಿಮ್ಮ ಮನಸ್ಸಾಕ್ಷಿಯ ಬಗ್ಗೆ ಅಲ್ಲ, ಇತರರ ಮನಸ್ಸಾಕ್ಷಿಯ ಬಗ್ಗೆ ಸೂಚಿಸುತ್ತಿದ್ದೇನೆ. ಆ ವ್ಯಕ್ತಿಯ ಮನಸ್ಸಾಕ್ಷಿಯ ನಿಮಿತ್ತ ನನ್ನ ಸ್ವಾತಂತ್ರ್ಯಕ್ಕೆ ಏಕೆ ಅಡ್ಡಿಯಾಗಬೇಕು?
30ನಾನು ಕೃತಜ್ಞತೆ ಸಲ್ಲಿಸಿ ಆ ಊಟವನ್ನು ಮಾಡಿದರೆ, ಹಾಗೆ ದೇವರಿಗೆ ಕೃತಜ್ಞತೆ ಸಲ್ಲಿಸಿ ಮಾಡಿದ ಊಟಕ್ಕಾಗಿ ನನ್ನ ಮೇಲೆ ತಪ್ಪುಹೊರಿಸುವುದೇಕೆ?
31ಆದ್ದರಿಂದ ನೀವು ಊಟಮಾಡಿದರೂ ಪಾನೀಯ ಸೇವಿಸಿದರೂ ಯಾವುದನ್ನೇ ಮಾಡಿದರೂ ಎಲ್ಲವನ್ನೂ ದೇವರ ಮಹಿಮೆಗಾಗಿ ಮಾಡಿರಿ.
32ಯೆಹೂದ್ಯರಿಗಾಗಲಿ, ಗ್ರೀಕರಿಗಾಗಲಿ, ದೇವರ ಸಭೆಗಾಗಲಿ ವಿಘ್ನವಾಗಬೇಡಿರಿ.
33ನಾನಂತೂ ಎಲ್ಲರನ್ನೂ, ಎಲ್ಲದರಲ್ಲೂ ಮೆಚ್ಚಿಸಲು ಶ್ರಮಿಸುವವನಾಗಿದ್ದೇನೆ. ಏಕೆಂದರೆ, ನಾನು ನನ್ನ ಸ್ವಂತ ಹಿತವನ್ನೇ ಹುಡುಕದೆ, ಅನೇಕರು ರಕ್ಷಣೆ ಹೊಂದಬೇಕೆಂದು ಇತರರ ಹಿತಕ್ಕಾಗಿ ಶ್ರಮಿಸುವವನಾಗಿದ್ದೇನೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.