Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಪೂರ್ವಕಾಲ ವೃತ್ತಾಂತ 17

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ದಾವೀದನು ತನ್ನ ಅರಮನೆಯಲ್ಲಿ ವಾಸಿಸುತ್ತಿದ್ದಾಗ, ಒಂದು ದಿನ ದಾವೀದನು ಪ್ರವಾದಿಯಾದ ನಾತಾನನಿಗೆ, “ನೋಡು, ನಾನು ದೇವದಾರು ಮರದ ಅರಮನೆಯಲ್ಲಿ ವಾಸವಾಗಿದ್ದೇನೆ. ಆದರೆ ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ಗುಡಾರದಲ್ಲಿರುತ್ತದೆ,” ಎಂದನು.
2ಆಗ ನಾತಾನನು ದಾವೀದನಿಗೆ, “ನಿನ್ನ ಹೃದಯದಲ್ಲಿ ಏನು ಇದೆಯೋ ಅದನ್ನು ಮಾಡು; ಏಕೆಂದರೆ ದೇವರು ನಿನ್ನ ಸಂಗಡ ಇದ್ದಾರೆ,” ಎಂದನು.
3ಅದೇ ರಾತ್ರಿಯಲ್ಲಿ ಯೆಹೋವ ದೇವರ ವಾಕ್ಯವು ನಾತಾನನಿಗೆ ಉಂಟಾಗಿ ಹೇಳಿದ್ದೇನೆಂದರೆ:
4“ನೀನು ಹೋಗಿ ನನ್ನ ಸೇವಕನಾದ ದಾವೀದನಿಗೆ, ‘ಯೆಹೋವ ದೇವರು ಹೇಳುವುದೇನೆಂದರೆ: ನಾನು ವಾಸವಾಗಿರುವುದಕ್ಕೆ ನೀನು ನನಗೆ ಆಲಯವನ್ನು ಕಟ್ಟಿಸಬೇಡ.
5ಏಕೆಂದರೆ ನಾನು ಈಜಿಪ್ಟಿನಿಂದ ಇಸ್ರಾಯೇಲರನ್ನು ಬರಮಾಡಿದ ದಿವಸ ಮೊದಲುಗೊಂಡು, ಇಂದಿನವರೆಗೂ ಆಲಯದಲ್ಲಿ ವಾಸಮಾಡದೆ ಒಂದು ಗುಡಾರದ ಸ್ಥಳದಿಂದ ಇನ್ನೊಂದು ಗುಡಾರದ ಸ್ಥಳಕ್ಕೂ, ಒಂದು ತಂಗುವ ಸ್ಥಳದಿಂದ ಇನ್ನೊಂದು ತಂಗುವ ಸ್ಥಳಕ್ಕೂ ಹೋಗುತ್ತಿದ್ದೆನು.
6ನಾನು ನನ್ನ ಜನರಾದ ಇಸ್ರಾಯೇಲರನ್ನು ಪರಿಪಾಲಿಸಲು ಆಜ್ಞಾಪಿಸಿದ ಇಸ್ರಾಯೇಲಿನ ಅಧಿಪತಿಗಳಲ್ಲಿ ಒಬ್ಬನ ಜೊತೆಯಾದರೂ, “ನೀವು ನನಗೆ ದೇವದಾರು ಮನೆಯನ್ನು ಏಕೆ ಕಟ್ಟಲಿಲ್ಲ,” ಎಂದು ನಾನು ಸಮಸ್ತ ಇಸ್ರಾಯೇಲಿನ ಸಂಗಡ ಸಂಚರಿಸಿದ ಯಾವ ಸ್ಥಳದಲ್ಲಾದರೂ, ಯಾವಾಗಲಾದರೂ ಕೇಳಿದೆನೋ?’
7“ಈಗ ನೀನು ನನ್ನ ಸೇವಕನಾದ ದಾವೀದನಿಗೆ ಹೇಳಬೇಕಾದದ್ದೇನೆಂದರೆ, ‘ಸೇನಾಧೀಶ್ವರ ಯೆಹೋವ ದೇವರು ನಿನಗೆ ತಿಳಿಸುವುದೇನೆಂದರೆ: ಕುರಿಗಳ ಹಿಂದೆ ಹೋಗುತ್ತಿದ್ದ ನಿನ್ನನ್ನು ನಾನು ಕುರಿಯ ಹಟ್ಟಿಯಿಂದ ತೆಗೆದುಕೊಂಡು, ನನ್ನ ಜನರಾದ ಇಸ್ರಾಯೇಲರ ಮೇಲೆ ನಾಯಕನಾಗಿರುವಂತೆ ನೇಮಿಸಿದೆನು.
8ನೀನು ಎಲ್ಲಿ ಹೋದರೂ ಅಲ್ಲಿ ನಿನ್ನ ಸಂಗಡ ಇದ್ದು, ನಿನ್ನ ಶತ್ರುಗಳನ್ನೆಲ್ಲಾ ನಿನ್ನ ಮುಂದೆಯೇ ಸಂಹರಿಸಿದೆನು. ಭೂಮಿಯಲ್ಲಿರುವ ಮಹಾಪುರುಷರ ಹೆಸರಿನ ಹಾಗೆ ನಿನ್ನ ಹೆಸರನ್ನೂ ಪ್ರಸಿದ್ಧಪಡಿಸುವೆನು.
9ಇದಲ್ಲದೆ ನಾನು ನನ್ನ ಜನರಾದ ಇಸ್ರಾಯೇಲರಿಗೆ ಒಂದು ಸ್ಥಳವನ್ನು ಏರ್ಪಡಿಸಿ, ಅವರು ಇನ್ನು ಮೇಲೆ ಯಾವ ಭಯವೂ ಇಲ್ಲದೆ ಸ್ವಸ್ಥಳದಲ್ಲಿ ವಾಸವಾಗಿರುವ ಹಾಗೆ ಅವರನ್ನು ನೆಲೆಗೊಳಿಸುವೆನು.
10ಪೂರ್ವಕಾಲದಲ್ಲಿ ನಾನು ನನ್ನ ಜನರಾದ ಇಸ್ರಾಯೇಲರ ಮೇಲೆ ನ್ಯಾಯಾಧಿಪತಿಗಳನ್ನು ನೇಮಿಸಿದೆ. ಆ ದಿವಸದಿಂದ ಈಚೆಗೆ, ದುಷ್ಟರು ಇನ್ನು ಮೇಲೆ ಇಸ್ರಾಯೇಲರನ್ನು ಕುಗ್ಗಿಸದೆ ಇರುವರು. ನಾನು ನಿನ್ನ ಸಮಸ್ತ ಶತ್ರುಗಳನ್ನು ತಗ್ಗಿಸಿದ್ದೇನೆ. “ ‘ಯೆಹೋವ ದೇವರಾದ ನಾನು ನಿನಗೆ ಮನೆಯನ್ನು ಕಟ್ಟುವೆನು, ಎಂದು ನಿನಗೆ ತಿಳಿಸುತ್ತೇನೆ.
11ನಿನ್ನ ಆಯುಷ್ಕಾಲವು ಮುಗಿದ ಮೇಲೆ, ನೀನು ನಿನ್ನ ಪಿತೃಗಳ ಬಳಿಗೆ ಹೋಗಿ ವಿಶ್ರಮಿಸುವಾಗ, ನಾನು ನಿನ್ನ ಸಂತತಿಯಲ್ಲಿ ಒಬ್ಬನನ್ನು ನಿನ್ನ ಉತ್ತರಾಧಿಕಾರಿಯನ್ನಾಗಿ ನೇಮಿಸಿ, ಅವನ ರಾಜ್ಯವನ್ನು ಸ್ಥಿರಮಾಡುವೆನು.
12ಅವನೇ ನನಗೆ ದೇವಾಲಯವನ್ನು ಕಟ್ಟುವನು. ನಾನು ಅವನ ರಾಜಸಿಂಹಾಸನವನ್ನು ಸದಾಕಾಲಕ್ಕೂ ಸ್ಥಿರಮಾಡುವೆನು.
13ನಾನು ಅವನ ತಂದೆಯಾಗಿರುವೆನು. ಅವನು ನನಗೆ ಮಗನಾಗಿರುವನು. ನಿನಗಿಂತ ಮುಂಚೆ ಇದ್ದವನ ಮೇಲಿಂದ ನನ್ನ ಪ್ರೀತಿಯನ್ನು ಹಿಂತೆಗೆದುಕೊಂಡ ಹಾಗೆ ಎಂದಿಗೂ ಅವನಿಂದ ಹಿಂತೆಗೆಯುವುದಿಲ್ಲ.
14ಅವನನ್ನು ನನ್ನ ಮನೆಯಲ್ಲಿಯೂ, ನನ್ನ ರಾಜ್ಯದಲ್ಲಿಯೂ ಸದಾಕಾಲಕ್ಕೂ ಸ್ಥಿರಗೊಳಿಸುವೆನು. ಅವನ ಸಿಂಹಾಸನವು ಯುಗಯುಗಾಂತರಕ್ಕೂ ಶಾಶ್ವತವಾಗಿರುವುದು,’ ” ಎಂದು ಹೇಳಿದರು.
15ನಾತಾನನು ಈ ಸಮಸ್ತ ಪ್ರಕಟಣೆಯ ಮಾತುಗಳನ್ನು ದಾವೀದನಿಗೆ ತಿಳಿಸಿದನು. ದಾವೀದನ ಪ್ರಾರ್ಥನೆ
16ಅನಂತರ ಅರಸನಾದ ದಾವೀದನು ಒಳಗೆ ಪ್ರವೇಶಿಸಿ, ಯೆಹೋವ ದೇವರ ಸನ್ನಿಧಿಯಲ್ಲಿ ಕುಳಿತುಕೊಂಡು, “ದೇವರೇ, ಯೆಹೋವ ದೇವರೇ, ನನ್ನಂಥವನಿಗೆ ನೀವು ಈ ಪದವಿಯನ್ನು ಅನುಗ್ರಹಿಸಿ, ಇಷ್ಟು ಮುಂದಕ್ಕೆ ತರಲು ನಾನೆಷ್ಟರವನು? ನನ್ನ ಕುಟುಂಬ ಎಷ್ಟರದು?
17ಯೆಹೋವ ದೇವರೇ, ಇದು ನಿಮ್ಮ ದೃಷ್ಟಿಯಲ್ಲಿ ಅಲ್ಪವೆಂದು ಕಾಣಿಸಿದರೂ ನೀವು ನಿಮ್ಮ ಸೇವಕನ ಸಂತಾನದ ಭವಿಷ್ಯದ ಕುರಿತೂ ವಾಗ್ದಾನಮಾಡಿರುವಿರಿ. ಯೆಹೋವ ದೇವರೇ, ನೀವು ನನ್ನನ್ನು ಮನುಷ್ಯರಲ್ಲಿ ಅತ್ಯುನ್ನತ ವ್ಯಕ್ತಿಯಂತೆ ನೋಡಿರುವಿರಿ.
18“ನಿಮ್ಮ ಸೇವಕನ ಘನತೆಯ ನಿಮಿತ್ತ, ದಾವೀದನು ಇನ್ನೂ ಹೆಚ್ಚಾಗಿ ಹೇಳಿಕೊಳ್ಳುವುದೇನಿದೆ? ಏಕೆಂದರೆ ನೀವು ನಿಮ್ಮ ಸೇವಕನನ್ನು ಚೆನ್ನಾಗಿ ಬಲ್ಲಿರಿ.
19ಯೆಹೋವ ದೇವರೇ, ನಿಮ್ಮ ಸೇವಕನ ನಿಮಿತ್ತವಾಗಿಯೂ, ನಿಮ್ಮ ಚಿತ್ತಾನುಸಾರವಾಗಿಯೂ ಈ ಮಹಾಕಾರ್ಯಗಳನ್ನೆಲ್ಲಾ ನಡೆಸಿ, ಎಲ್ಲ ವಾಗ್ದಾನಗಳನ್ನು ತಿಳಿಯಪಡಿಸಿರುವಿರಿ.
20“ಯೆಹೋವ ದೇವರೇ, ನಮ್ಮ ಕಿವಿಗಳಿಂದ ನಾವು ಕೇಳಿದವುಗಳನ್ನೆಲ್ಲಾ ಆಲೋಚಿಸಿ ನೋಡಿದರೆ ನಿಮ್ಮ ಹಾಗೆ ಯಾರೂ ಇಲ್ಲ; ನಿಮ್ಮ ಹೊರತು ದೇವರು ಯಾರೂ ಇಲ್ಲ.
21ಭೂಲೋಕದಲ್ಲಿ ನಿಮ್ಮ ಜನರಾದ ಇಸ್ರಾಯೇಲರಿಗೆ ಸಮಾನವಾದ ಜನಾಂಗ ಯಾವುದು? ದೇವರಾದ ನೀವೇ ಹೋಗಿ ಅವರನ್ನು ಸ್ವಜನರಾಗಿ ವಿಮೋಚಿಸಿ ನಿಮ್ಮ ಹೆಸರನ್ನು ಪ್ರಸಿದ್ಧಿಪಡಿಸಿದ್ದೀರಿ. ಈಜಿಪ್ಟಿನಿಂದ ವಿಮೋಚಿಸಿ ತಂದ ನಿಮ್ಮ ಪ್ರಜೆಗಳ ಎದುರಿನಿಂದ ಜನಾಂಗಗಳನ್ನು ಓಡಿಸುವ ಮೂಲಕ ವಿಸ್ಮಯಕರವಾದ ಮಹಾ ಅದ್ಭುತಗಳನ್ನು ಮಾಡಿದ್ದೀರಲ್ಲವೇ?
22ನೀವು ಇಸ್ರಾಯೇಲ್ ಜನರನ್ನು ಶಾಶ್ವತವಾಗಿ ನಿಮ್ಮ ಸ್ವಂತ ಜನರಾಗಿ ಮಾಡಿದಿರಿ; ಯೆಹೋವ ದೇವರೇ, ನೀವೇ ಅವರಿಗೆ ದೇವರಾದಿರಿ.
23“ಈಗ ಯೆಹೋವ ದೇವರೇ, ನೀವು ನಿಮ್ಮ ಸೇವಕನನ್ನು ಕುರಿತೂ, ಅವನ ಕುಟುಂಬವನ್ನು ಕುರಿತೂ ಮಾಡಿದ ವಾಗ್ದಾನವನ್ನು ನೆರವೇರಿಸಿ ಅದನ್ನು ಶಾಶ್ವತವಾಗಿ ಸ್ಥಿರಪಡಿಸಿರಿ.
24‘ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಇಸ್ರಾಯೇಲ್ ದೇವರಾಗಿದ್ದಾರೆಂದು ನಿಮ್ಮ ನಾಮವು ಶಾಶ್ವತವಾಗಿ ಘನಪಡಲಿ,’ ಎಂದು ಜನರು ಹೇಳಲಿ. ನಿಮ್ಮ ಸೇವಕನಾದ ದಾವೀದನ ಮನೆಯು ನಿಮ್ಮ ಮುಂದೆ ಸ್ಥಿರವಾಗಿರಲಿ.
25“ಏಕೆಂದರೆ ನನ್ನ ದೇವರೇ, ನೀವು ನಿಮ್ಮ ಸೇವಕನಿಗೆ ಮನೆಯನ್ನು ಕಟ್ಟುವೆನೆಂದು ಪ್ರಕಟ ಮಾಡಿದ್ದರಿಂದ ನಿಮ್ಮನ್ನು ಪ್ರಾರ್ಥಿಸುವುದಕ್ಕೆ ನಿಮ್ಮ ಸೇವಕನ ಹೃದಯದಲ್ಲಿ ಧೈರ್ಯ ಉಂಟಾಯಿತು.
26ಯೆಹೋವ ದೇವರೇ, ನಿಮ್ಮ ಸೇವಕನಿಗೆ ಈ ಒಳ್ಳೆಯ ಸಂಗತಿಗಳನ್ನು ವಾಗ್ದಾನಮಾಡಿದ ನೀವು ದೇವರಾಗಿದ್ದೀರಿ.
27ಈಗ ನಿಮ್ಮ ಸೇವಕನ ಮನೆಯು ನಿಮ್ಮ ಮುಂದೆ ಶಾಶ್ವತವಾಗಿ ಇರುವ ಹಾಗೆ, ಅದನ್ನು ಆಶೀರ್ವದಿಸಲು ಸಂತೋಷಪಡಿರಿ; ಯೆಹೋವ ದೇವರೇ, ನೀವು ಆಶೀರ್ವದಿಸಿದ್ದೀರಿ, ಅದು ನಿತ್ಯ ಆಶೀರ್ವಾದ ಹೊಂದಿರುವುದು.”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.