Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಪೂರ್ವಕಾಲ ವೃತ್ತಾಂತ 10

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಫಿಲಿಷ್ಟಿಯರು ಇಸ್ರಾಯೇಲರ ವಿರುದ್ಧ ಯುದ್ಧಮಾಡಿದರು. ಆಗ ಇಸ್ರಾಯೇಲರು ಫಿಲಿಷ್ಟಿಯರಿಂದ ಸೋತು ಓಡಿಹೋಗಿ, ಗಿಲ್ಬೋವ ಬೆಟ್ಟದಲ್ಲಿ ಹತರಾದರು.
2ಫಿಲಿಷ್ಟಿಯರು ಸೌಲನನ್ನೂ, ಅವನ ಪುತ್ರರನ್ನೂ ಬಿಡದೆ ಬೆನ್ನಟ್ಟಿ, ಸೌಲನ ಪುತ್ರರಾದ ಯೋನಾತಾನನನ್ನೂ ಅಬೀನಾದಾಬನನ್ನೂ, ಮಲ್ಕೀಷೂವನನ್ನೂ ಕೊಂದುಬಿಟ್ಟರು.
3ಯುದ್ಧವು ಸೌಲನಿದ್ದ ಕಡೆಯಲ್ಲಿ ಬಹುಘೋರವಾಗಿತ್ತು; ಬಿಲ್ಲುಗಾರರು ಅವನನ್ನು ಬಾಣಗಳಿಂದ ಹೊಡೆದಾಗ ಅವನು ತೀವ್ರವಾಗಿ ಗಾಯಗೊಂಡನು.
4ಆಗ ಸೌಲನು ತನ್ನ ಆಯುಧಗಳನ್ನು ಹೊರುವವನಿಗೆ, “ಈ ಸುನ್ನತಿ ಇಲ್ಲದವರು ಬಂದು ನನ್ನನ್ನು ಅವಮಾನ ಮಾಡದ ಹಾಗೆ, ನೀನು ನಿನ್ನ ಖಡ್ಗವನ್ನು ಹಿರಿದು ನನ್ನನ್ನು ತಿವಿ,” ಎಂದನು. ಆದರೆ ಅವನ ಆಯುಧ ಹೊರುವವನು ಬಹು ಭಯಪಟ್ಟದ್ದರಿಂದ ಹಾಗೆ ಮಾಡದೆ ಹೋದನು. ಆಗ ಸೌಲನು ತನ್ನ ಖಡ್ಗವನ್ನು ತೆಗೆದುಕೊಂಡು ಅದರ ಮೇಲೆ ಬಿದ್ದನು.
5ಸೌಲನು ಸತ್ತು ಹೋದದ್ದನ್ನು ಅವನ ಆಯುಧ ಹೊರುವವನು ಕಂಡಾಗ, ಅವನೂ ತನ್ನ ಖಡ್ಗದ ಮೇಲೆ ಬಿದ್ದು, ಅವನ ಸಂಗಡ ಸತ್ತನು.
6ಸೌಲನೂ, ಅವನ ಮೂರು ಮಂದಿ ಪುತ್ರರೂ, ಅವನ ಮನೆಯವರೆಲ್ಲರೂ ಒಟ್ಟಾಗಿ ಅದೇ ದಿನ ಸತ್ತರು.
7ಇಸ್ರಾಯೇಲರ ಸೈನಿಕರು ಸೋತು ಹೋದರೆಂದೂ, ಸೌಲನೂ, ಅವನ ಪುತ್ರರೂ ಸತ್ತರೆಂದೂ ತಗ್ಗಿನಲ್ಲಿ ವಾಸವಾಗಿದ್ದ ಇಸ್ರಾಯೇಲರೆಲ್ಲರು ಕಂಡಾಗ, ಅವರು ತಮ್ಮ ಪಟ್ಟಣಗಳನ್ನು ಬಿಟ್ಟು ಓಡಿಹೋದರು. ಆಗ ಫಿಲಿಷ್ಟಿಯರು ಬಂದು ಅವುಗಳಲ್ಲಿ ವಾಸಿಸಿದರು.
8ಮಾರನೆಯ ದಿವಸದಲ್ಲಿ ಫಿಲಿಷ್ಟಿಯರು ಸತ್ತವರ ಒಡವೆಗಳನ್ನು ಸುಲಿದುಕೊಳ್ಳಲು ಬಂದಾಗ, ಗಿಲ್ಬೋವ ಬೆಟ್ಟದಲ್ಲಿ ಸತ್ತುಬಿದ್ದಿರುವ ಸೌಲನನ್ನೂ, ಅವನ ಪುತ್ರರನ್ನೂ ಕಂಡರು.
9ಅವರು ಅವನನ್ನು ಸುಲಿದುಕೊಂಡು ಅವನ ತಲೆಯನ್ನೂ, ಅವನ ಆಯುಧಗಳನ್ನೂ ತೆಗೆದುಕೊಂಡು, ತಮ್ಮ ವಿಗ್ರಹಗಳ ಮಂದಿರಗಳಿಗೂ, ಜನರಿಗೂ ಜಯವಾರ್ತೆಯನ್ನು ಸಾರುವ ಹಾಗೆ ಫಿಲಿಷ್ಟಿಯರ ದೇಶದ ಸುತ್ತಲೂ ಕಳುಹಿಸಿದರು.
10ಸೌಲನ ಆಯುಧಗಳನ್ನು ತಮ್ಮ ದೇವರುಗಳ ಮಂದಿರದಲ್ಲಿ ಇಟ್ಟು, ಅವನ ತಲೆಯನ್ನು ದಾಗೋನನ ಆಲಯದಲ್ಲಿ ನೇತುಹಾಕಿದರು.
11ಫಿಲಿಷ್ಟಿಯರು ಸೌಲನಿಗೆ ಮಾಡಿದ್ದನ್ನೆಲ್ಲಾ ಯಾಬೇಷ್ ಗಿಲ್ಯಾದಿನವರೆಲ್ಲರು ಕೇಳಿದಾಗ,
12ಅವರಲ್ಲಿರುವ ಸಮಸ್ತ ಪರಾಕ್ರಮಶಾಲಿಗಳು ಎದ್ದು ಸೌಲನ ಶವವನ್ನೂ, ಅವನ ಪುತ್ರರ ಶವಗಳನ್ನೂ ತೆಗೆದುಕೊಂಡು ಯಾಬೇಷಿಗೆ ಬಂದು, ಅವರ ಎಲುಬುಗಳನ್ನು ತೆಗೆದುಕೊಂಡು, ಅವುಗಳನ್ನು ಯಾಬೇಷಿನಲ್ಲಿರುವ ಒಂದು ಏಲಾ ಮರದ ಕೆಳಗೆ ಸಮಾಧಿಮಾಡಿ, ಏಳು ದಿವಸ ಉಪವಾಸ ಮಾಡಿದರು.
13ಹೀಗೆಯೇ ಸೌಲನು ಯೆಹೋವ ದೇವರಿಗೆ ವಿರೋಧವಾಗಿ ಮಾಡಿದ ತನ್ನ ಅಪರಾಧದ ನಿಮಿತ್ತ ಸತ್ತುಹೋದನು. ಅವನು ಯೆಹೋವ ದೇವರ ವಾಕ್ಯವನ್ನು ಕೈಗೊಳ್ಳದೆ, ಅದಕ್ಕೆ ವಿರೋಧವಾಗಿ ನಡೆದು, ಯೆಹೋವ ದೇವರನ್ನು ವಿಚಾರಿಸದೆ, ಯಕ್ಷಿಣಿಗಾರರನ್ನು ವಿಚಾರಿಸಿದ್ದರಿಂದ,
14ಯೆಹೋವ ದೇವರು ಅವನನ್ನು ಕೊಂದುಹಾಕಿ, ರಾಜ್ಯವನ್ನು ಇಷಯನ ಮಗನಾದ ದಾವೀದನ ಕಡೆಗೆ ತಿರುಗಿಸಿದರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.